ADVERTISEMENT

‘ಉಡಾನ್ 2019’ ಸಾಂಸ್ಕೃತಿಕ ಉತ್ಸವ 18ರಿಂದ

ಎರಡು ಜಿಲ್ಲೆಗಳ 700 ಯುವಕರು ಪಾಲ್ಗೊಳ್ಳುವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 12:35 IST
Last Updated 13 ಜನವರಿ 2019, 12:35 IST
ಚೇತನ್‌ ಮೇಗೂರ
ಚೇತನ್‌ ಮೇಗೂರ   

ಬೀದರ್‌: ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂ ಸೆಂಚುರಿ ವತಿಯಿಂದ ಜ. 18ರಿಂದ ಮೂರು ದಿನ ನಗರದಲ್ಲಿ ‘ಉಡಾನ್ 2019’ ಅಂತರ ಕಾಲೇಜು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.

‘18 ರಿಂದ 25 ವರ್ಷದೊಳಗಿನ ಯುವಕ, ಯುವತಿಯರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಆಯೋಜಿಸಿರುವ ‘ಉಡಾನ್ 2019’ ಉತ್ಸವದಲ್ಲಿ ಬೀದರ್‌ ಹಾಗೂ ಕಲಬುರ್ಗಿ ಜಿಲ್ಲೆಯ 80 ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ಕಾರ್ಯಕ್ರಮದ ಮುಖ್ಯಸ್ಥ ಚೇತನ್‌ ಮೇಗೂರ ನಗರದಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.

‘ಜಿಲ್ಲಾ ರಂಗ ಮಂದಿರದಲ್ಲಿ ಸಂಗೀತ, ನೃತ್ಯ, ಪೇಂಟಿಂಗ್, ರಸಪ್ರಶ್ನೆ, ರಂಗೋಲಿ, ಸಮೂಹ ನೃತ್ಯ, ಫ್ಯಾಷನ್‌ ಶೋ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ಟೇಬಲ್‌ ಟೆನಿಸ್ ಹಾಗೂ ಚದುರಂಗ ಸ್ಪರ್ಧೆ ನಡೆಯಲಿದೆ. ಜ.18 ರಂದು ಬೆಳಿಗ್ಗೆ 8 ಗಂಟೆಗೆ ಬರೀದ್‌ ಶಾಹಿ ಪಾರ್ಕ್‌ ಬಳಿ ಮ್ಯಾರಥಾನ್‌ಗೆ ವಿಧಾನ ಪರಿಷತ್‌ ಸದಸ್ಯ ಚಂದ್ರಶೇಖರ ಪಾಟೀಲ ಚಾಲನೆ ನೀಡುವರು. ಬೆಳಿಗ್ಗೆ 10 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ’ ಎಂದು ಹೇಳಿದರು.

ADVERTISEMENT

‘ಜ.19 ರಂದು ಬೆಳಿಗ್ಗೆ 9 ಗಂಟೆಗೆ ಯವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಂ ಖಾನ್‌ ಕ್ರೀಡಾಕೂಟ ಉದ್ಘಾಟಿಸುವರು. ಜ.20 ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿರುವ ಅಂತಿಮ ಸ್ಪರ್ಧೆಗಳಿಗೆ ಸಂಸದ ಭಗವಂಗ ಖೂಬಾ ಚಾಲನೆ ನೀಡುವರು. ರಾತ್ರಿ 8.30ಕ್ಕೆ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪೂರ ವಿಜೇತರಿಗೆ ಬಹುಮಾನ ವಿತರಿಸುವರು’ ಎಂದು ತಿಳಿಸಿದರು.

‘ಉತ್ಸವದಲ್ಲಿ 700 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಲಬುರ್ಗಿ, ಬಸವಕಲ್ಯಾಣ, ಹುಮನಾಬಾದ್‌ನಿಂದ ಬರುವ ಸ್ಪರ್ಧಾಳುಗಳಿಗೆ ಉಚಿತ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರವೇಶ ಉಚಿತವಾಗಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಪ್ರದಾನ ಮಾಡಲಾಗುವುದು. ಉತ್ಸವದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುವುದು. ಹೆಸರು ನೋಂದಣಿ ಹಾಗೂ ವಿವರಗಳಿಗೆ ಮೊಬೈಲ್‌: 872164645, 9141277161 ಅಥವಾ 9845621852 ಅನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.

ರೋಟರಿ ಕ್ಲಬ್‌ ಆಫ್‌ ಬೀದರ್‌ ನ್ಯೂ ಸೆಂಚುರಿ ಅಧ್ಯಕ್ಷ ಸಂಜಯ ಹತ್ತಿ, ಕಾರ್ಯದರ್ಶಿ ನಿತಿನ್ ಕರ್ಪೂರ್, ಡಾ.ಕಪಿಲ್‌ ಪಾಟೀಲ,
ಕಾಮಶೆಟ್ಟಿ ಚಿಕ್ಕಬಸೆ, ನಿತೇಶ ಬಿರಾದಾರ, ಜಗದೀಶ ಮರೂರ್, ಸತೀಶ ಸ್ವಾಮಿ,ಫರ್ದಿನ್‌, ಜಯೇಶ್ ಪಾಟೀಲ ಹಾಗೂ ರಾಜಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.