ಚಿಟಗುಪ್ಪ (ಹುಮನಾಬಾದ್): ಉಡಬಾಳ ಗ್ರಾಮದಿಂದ ಚಿಟಗುಪ್ಪ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ತಾಲ್ಲೂಕಿನ ಪ್ರಮುಖ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸವಾರರು ಆತಂಕದಲೇ ಸಂಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಉಡಬಾಳ ಗ್ರಾಮದಿಂದ ಚಿಟಗುಪ್ಪ ಪಟ್ಟಣಕ್ಕೆ ಸುಮಾರು 8 ಕಿ.ಮೀ ರಸ್ತೆಯಲ್ಲಿ 6 ಕಿ.ಮೀ ರಸ್ತೆ ಹಾಳಾಗಿದೆ. ತಗ್ಗು ಗುಂಡಿಗಳು ಬಿದ್ದು ಕಚ್ಚಾ ರಸ್ತೆಯೆಂತೆ ಮಾರ್ಪಾಟಾಗಿದೆ. ರಸ್ತೆಯ ಎರಡೂ ಬದಿಯಲ್ಲಿನ ನಾಲಾಗಳು ಬಹುತೇಕ ಮುಚ್ಚಿಹೋಗಿವೆ. ಇದರಿಂದಾಗಿ ಮಳೆ ನೀರು ಸಹ ರಸ್ತೆಯ ಮೇಲೆ ನಿಲ್ಲುತ್ತಿವೆ.
‘ಮಳೆ ನೀರು ರಸ್ತೆಯಲ್ಲಿನ ತಗ್ಗು ಗುಂಡಿಗಳಲ್ಲಿ ಸಂಗ್ರಹಗೊಳ್ಳುತ್ತಿರುವ ಕಾರಣ ಗುಂಡಿಗಳು ಕಾಣದೆ ಇದ್ದಾಗ ವಾಹನಗಳು ಗುಂಡಿಯಲ್ಲಿ ಬಿದ್ದು ಅಪಘಾತಗಳು ಸಂಭವಿಸುತ್ತಿವೆ’ ಎಂದು ದ್ವಿಚಕ್ರ ವಾಹನ ಸವಾರ ಶಿವಕುಮಾರ ಮುಸ್ತರಿ.
ಈ ರಸ್ತೆಯಿಂದ ನಿತ್ಯವೂ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ರಸ್ತೆ ಕಳೆದ ಒಂದು ವರ್ಷಗಳಿಂದ ದುರಸ್ತಿ ಕಾಣದೆ ಹಾಳಾಗಿದೆ.
ತಾಲ್ಲೂಕಿನ ಐತಿಹಾಸಿಕ ಚಾಂಗಲೇರಾ ವೀರಭದ್ರೇಶ್ವರ ದೇವಾಲಯ ಹಾಗೂ ಕರಕನ್ನಳ್ಳಿ ಬಕ್ಕಪ್ರಭು ದೇವಸ್ಥಾನಕ್ಕೆ ಹೋಗುವ ಸಾವಿರಾರು ಭಕ್ತರು ಈ ರಸ್ತೆಯಿಂದ ನಿತ್ಯ ಸಂಚರಿಸುತ್ತಾರೆ. ನಿರ್ಣಾ, ಉಡಬಾಳ, ಮುಸ್ತರಿ ಗ್ರಾಮಸ್ಥರು ಸಣ್ಣ ಪುಟ್ಟ ಕಾರ್ಯಕ್ಕೂ ಚಿಟಗುಪ್ಪ ಪಟ್ಟಣಕ್ಕೆ ಹೋಗಿ ಬರುವುದು ಮಾಡುತ್ತಾರೆ. ಇದರಿಂದ 8 ಕಿ.ಮೀ ಅಂತರದ ಈ ರಸ್ತೆಯಲ್ಲಿ ನಿರಂತರ ಜನದಟ್ಟಣೆ ಇರುತ್ತದೆ.
ಡಾಂಬರ್ ಸಂಪೂರ್ಣವಾಗಿ ಕಿತ್ತು ಹೋಗಿದ್ದರಿಂದ ತಗ್ಗು, ದಿನ್ನೆಗಳು ಉಂಟಾಗಿವೆ. ದ್ವಿಚಕ್ರ ವಾಹನ ಚಾಲಕರಂತೂ ಜೀವ ಕೈಯಲ್ಲಿ ಹಿಡಿದೇ ಸಂಚರಿಸುತ್ತಿದ್ದಾರೆ.
‘ಗುಂಡಿಗಳಲ್ಲಿನ ನೀರು ಸಿಡಿದು ಬಟ್ಟೆಗಳು ಒದ್ದೆಯಾಗಿ ಹಾಳಾಗುತ್ತಿವೆ. ರಾತ್ರಿ ಸಮಯದಲ್ಲಿ ವಾಹನ ಸವಾರರಿಗೆ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ’ ಎಂದು ಪ್ರಯಾಣಿಕ ಶ್ರೀನಿವಾಸ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಉಡಬಾಳದಿಂದ ಚಿಟಗುಪ್ಪ ಪಟ್ಟಣಕ್ಕೆ ಹೋಗಬೇಕಾದರೆ ಬಹಳ ಸಮಸ್ಯೆ ಆಗುತ್ತಿದೆ. ಯಾರೂ ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲತ್ತಿ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ರಸ್ತೆ ದುರಸ್ತಿ ಮಾಡಿ ಅನಾಹುತ ತಪ್ಪಿಸಬೇಕು.– ಭರತ್ ರೆಡ್ಡಿ, ನಿರ್ಣಾ ನಿವಾಸಿ
ರಸ್ತೆ ಸಂಪೂರ್ಣ ಹಾಳಾಗಿದೆ. ಮಳೆ ಬಂದರೆ ನೀರು ನಿಂತು ತಗ್ಗು ಇರುವುದೇ ಗೊತ್ತಾಗುವುದಿಲ್ಲ. ಇದರಿಂದ ಬೀಳುವುದು ಖಚಿತ. ಎದುರು ಯಾರಾದರೂ ಬಂದರೆ ಮತ್ತಷ್ಟು ಸಮಸ್ಯೆ. ಬೇಗ ರಸ್ತೆ ದುರಸ್ತಿ ಮಾಡಬೇಕು.– ಶಿವಕುಮಾರ, ವಾಹನ ಸವಾರ
ರಸ್ತೆ ಅಭಿವೃದ್ಧಿಗಾಗಿ ಮೇಲಧಿಕಾರಿಗಳಿಗೆ ಅನುದಾನದ ಪ್ರಸ್ತಾವ ಸಲ್ಲಿಸಲಾಗಿದೆ.– ವೆಂಕಟೇಶ್ ಸಿಂಧೆ, ಎಇಇ ಲೋಕೋಪಯೋಗಿ ಇಲಾಖೆ ಹುಮನಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.