ADVERTISEMENT

ಸಂಸ್ಕಾರವಿಲ್ಲದ ಸಂಸ್ಕೃತಿ ಸಚಿವ– ತಂಗಡಗಿ ಹೇಳಿಕೆಗೆ ಕೇಂದ್ರ ಸಚಿವ ಖೂಬಾ ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 12:14 IST
Last Updated 25 ಮಾರ್ಚ್ 2024, 12:14 IST
   

ಬೀದರ್‌: ‘ಶಿವರಾಜ ತಂಗಡಗಿ ಅವರು ಸಂಸ್ಕಾರವಿಲ್ಲದ ಸಂಸ್ಕೃತಿ ಸಚಿವರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಗೌರವಿಸಿ ಮಾತನಾಡಬೇಕೆನ್ನುವ ಕನಿಷ್ಠ ಸಂಸ್ಕಾರವಿಲ್ಲದ ತಂಗಡಗಿಯವರು ಅವರ ಬಗ್ಗೆ ತುಚ್ಚ ಭಾಷೆ ಬಳಸಿರುವುದು ಖಂಡನಾರ್ಹ’ ಎಂದು ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.

‘ಮೋದಿ ಮೋದಿ ಎಂದು ಹೇಳಿದವರ ಕಪಾಳಕ್ಕೆ ಹೊಡೆಯಬೇಕು’ ಎಂದು ಇತ್ತೀಚೆಗೆ ಕಾರಟಗಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಶಿವರಾಜ ತಂಗಡಗಿ ಹೇಳಿಕೆ ಕೊಟ್ಟಿದ್ದರು. ಅದಕ್ಕೆ ಇಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಖೂಬಾ, ಮೋದಿಯವರು ದೇಶದ ಅಭಿವೃದ್ಧಿಗಾಗಿ ಹಾಕುತ್ತಿರುವ ಶ್ರಮ ಇಡೀ ವಿಶ್ವಕ್ಕೆ ಗೊತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಜಗತ್ತಿನ ಎಲ್ಲಾ ದೇಶಗಳು ಮೋದಿಯವರ ಸಲಹೆಗೆ ಕಾಯುತ್ತವೆ. ಅಂತಹವರನ್ನು ಪಡೆದ ನಾವು ಧನ್ಯರು ಎಂದು ಹೇಳಿದ್ದಾರೆ.

ತಂಗಡಗಿ ಅವರು ಅವರಿಗೆ ವಹಿಸಿದ ಇಲಾಖೆಯ ಕಡೆಗೆ ಗಮನಹರಿಸಬೇಕು. ಪ್ರಧಾನಿ ವಿರುದ್ಧ ಅವರು ನೀಡಿರುವ ಹೇಳಿಕೆಯಿಂದ ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ. ಇಂತಹವರನ್ನು ಬೆಳೆಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ, ಬರುವ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಮುಖ್ಯಮಂತ್ರಿಯವರು ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು. ತಂಗಡಗಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ADVERTISEMENT

ಇದಕ್ಕೂ ಮುನ್ನ ಖೂಬಾ ಅವರು ಅವರ ಪಕ್ಷದ ಮುಖಂಡರು, ಕಾರ್ಯಕರ್ತರು, ಬೆಂಬಲಿಗರು ಹಾಗೂ ಬಂಜಾರ ಸಮಾಜದವರೊಂದಿಗೆ ಹೋಳಿ ಹಬ್ಬ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.