
ಹುಲಸೂರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ.10 ರಂದು ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟವಾದ ‘ಕಾಯಕ ಶರಣರ ಜಯಂತಿ ಹಾಗೂ ಕಾಯಕ ಶರಣ ಶ್ರೀ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದ ಜಾಹೀರಾತಿನಲ್ಲಿ ಶರಣ ಉರಿಲಿಂಗ ಪೆದ್ದಿ ಅವರ ಭಾವಚಿತ್ರವನ್ನು ಅಸಂಗತವಾಗಿ ಬಳಸಲಾಗಿದೆ ಎಂದು ಬೇಲೂರಿನ ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪಂಚಾಕ್ಷರಿ ಸ್ವಾಮಿಜಿ ಆಕ್ಷೇಪ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಭಾವಚಿತ್ರಗಳೊಂದಿಗೆ ಉರಿಲಿಂಗ ಪೆದ್ದಿ ಶರಣರ ಚಿತ್ರವನ್ನು ‘ಕಾಯಕ’ ಹೆಸರಿನಲ್ಲಿ ಅಸಹ್ಯಕರವಾಗಿ ಚಿತ್ರಿಸಿರುವುದು ಸಮಂಜಸವಲ್ಲ ಎಂದು ಅವರು ಬುಧವಾರ ಮಾಧ್ಯಮಕ್ಕೆ ತಿಳಿಸಿದರು.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಂಬಂಧಿತ ಸಚಿವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ದಲಿತ ಸಮುದಾಯದ ಶರಣರನ್ನು ಕೀಳಾಗಿ ಬಿಂಬಿಸುವ ಪ್ರವೃತ್ತಿ ಕೆಲವರಲ್ಲಿ ಕಾಣಿಸುತ್ತಿದೆ. ಮೇಲ್ವರ್ಗದ ಶರಣರ ಭಾವಚಿತ್ರಗಳನ್ನು ಗೌರವದಿಂದ ಬಳಕೆ ಮಾಡುವಾಗ, ಇತರ ಶರಣರ ವಿಷಯದಲ್ಲಿ ತಾರತಮ್ಯ ತೋರುವುದು ಸರಿಯಲ್ಲ. ಇಂತಹ ಚಿತ್ರಣವು ಯುವಜನತೆಯಲ್ಲಿ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.
ಉರಿಲಿಂಗ ಪೆದ್ದಿ ಶರಣರು 260ಕ್ಕೂ ಅಧಿಕ ವಚನಗಳನ್ನು ರಚಿಸಿದ್ದು, ಪಂಚಾಚಾರ, ಷಟಸ್ಥಲ ಹಾಗೂ ಅಷ್ಟಾವರಣ ವಿಚಾರಗಳಲ್ಲಿ ಅವರ ವಚನಗಳನ್ನು ಆಧಾರವಾಗಿ ಉಲ್ಲೇಖಿಸಲಾಗುತ್ತದೆ. ಅವರ ಪಾಂಡಿತ್ಯ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆದು ಮಠದ ವತಿಯಿಂದ ಸಮರ್ಪಕ ಭಾವಚಿತ್ರ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಸಂಘ–ಸಂಸ್ಥೆಗಳು ಅದನ್ನೇ ಬಳಸುವಂತೆ ಮನವಿ ಮಾಡಿ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.