ADVERTISEMENT

ಬೀದರ್: ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 129 ಹುದ್ದೆಗಳು ಖಾಲಿ

ಚಂದ್ರಕಾಂತ ಮಸಾನಿ
Published 3 ಅಕ್ಟೋಬರ್ 2019, 19:45 IST
Last Updated 3 ಅಕ್ಟೋಬರ್ 2019, 19:45 IST
ಬೀದರ್‌ನ ಜಿಲ್ಲಾ ಪಂಚಾಯಿತಿ ಕಚೇರಿ
ಬೀದರ್‌ನ ಜಿಲ್ಲಾ ಪಂಚಾಯಿತಿ ಕಚೇರಿ   

ಬೀದರ್: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿನ ಪ್ರಮುಖ ಹುದ್ದೆಗಳಲ್ಲಿ ಕಾಯಂ ಅಧಿಕಾರಿಗಳೇ ಇಲ್ಲ. ಮಹತ್ವದ ಹುದ್ದೆಗಳಲ್ಲಿರುವ ಅಧಿಕಾರಿಗಳು ಎರಡು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಸಿಬ್ಬಂದಿ ಹುದ್ದೆಗಳೂ ಅರ್ಧದಷ್ಟು ಖಾಲಿ ಇರುವ ಕಾರಣ ಸಾರ್ವಜನಿಕ ಕೆಲಸದ ಜತೆಗೆ ಅಭಿವೃದ್ಧಿಗೂ ಹೊಡೆತ ಬಿದ್ದಿದೆ.

ಬೀದರ್‌ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ 244 ಹುದ್ದೆಗಳ ಪೈಕಿ 129 ಹುದ್ದೆಗಳು ಖಾಲಿ ಇವೆ. ಜಿಲ್ಲಾ ಪಂಚಾಯಿತಿಯಲ್ಲಿ 88 ಹುದ್ದೆಗಳ ಪೈಕಿ 38 ಹುದ್ದೆಗಳು ಖಾಲಿ ಇವೆ. ಆರು ತಿಂಗಳಿಂದ ಮುಖ್ಯಲೆಕ್ಕಾಧಿಕಾರಿ ಹುದ್ದೆ ಖಾಲಿ ಇದೆ. ಲೆಕ್ಕಾಧಿಕಾರಿ, ಸಹಾಯಕ ಯೋಜನಾ ಅಧಿಕಾರಿ ಹಾಗೂ ತಾಂತ್ರಿಕ ಸಹಾಯಕ ಹುದ್ದೆಗಳೂ ಖಾಲಿ ಇವೆ. ಈ ಕಾರಣಕ್ಕೆ ಐದು ವರ್ಷಗಳಿಂದ ಲೆಕ್ಕ ಪರಿಶೋಧನೆಗೂ ಸಮಸ್ಯೆಯಾಗುತ್ತಿದೆ.

ಹಿಂದೆ ಮುಖ್ಯಲೆಕ್ಕಾಧಿಕಾರಿಯಾಗಿದ್ದ ರಾಜೇಂದ್ರ ಜೊನ್ನಿಕೇರಿ ಅವರು ಕೆಡಿಪಿ ಸಭೆಯಲ್ಲಿ ಖಾಲಿ ಹುದ್ದೆಗಳ ವಿಷಯ ಪ್ರಸ್ತಾಪಿಸಿ ಹುದ್ದೆಗಳ ಭರ್ತಿಗೂ ಮನವಿ ಮಾಡಿದ್ದರು. ಅವರ ನಿವೃತ್ತಿಯ ನಂತರ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಮುಖ್ಯಲೆಕ್ಕಾಧಿಕಾರಿ ಹುದ್ದೆಗೆ ನಿಯೋಜಿಸಲಾಗಿದೆ. ಒಬ್ಬರೇ ಅಧಿಕಾರಿ ಎರಡು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗದೇ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ.

ರಾಜ್ಯ ಸರ್ಕಾರ, ಹೊಸ ತಾಲ್ಲೂಕುಗಳಾದ ಚಿಟಗುಪ್ಪ, ಕಮಲನಗರ ಹಾಗೂ ಹುಲಸೂರ ತಾಲ್ಲೂಕಿನಲ್ಲಿ ಪೂರ್ಣಾವಧಿಗೆ ಒಬ್ಬ ಸಿಬ್ಬಂದಿಯನ್ನೂ ನೇಮಕ ಮಾಡಿಲ್ಲ. ಎಲ್ಲ ಹುದ್ದೆಗಳಿಗೂ ಪ್ರಭಾರಿಗಳನ್ನೇ ನಿಯೋಜಿಸಲಾಗಿದೆ.

ADVERTISEMENT

‘ಪ್ರಮುಖ ಹುದ್ದೆಗಳಲ್ಲೇ ಅಧಿಕಾರಿಗಳು ಇಲ್ಲದ ಕಾರಣ ಜಿಲ್ಲೆಯಲ್ಲಿ ಸರ್ಕಾರಿ ಕೆಲಸಗಳು ತ್ವರಿತವಾಗಿ ಆಗುತ್ತಿಲ್ಲ. ಜಿಲ್ಲೆಗೆ ಅಧಿಕಾರಿಗಳನ್ನು ನಿಯೋಜಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ಚುನಾಯಿತ ಪ್ರತಿನಿಧಿಗಳು ವಿಫಲರಾಗಿದ್ದಾರೆ’ ಎನ್ನುತ್ತಾರೆ ಬೀದರ್‌ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶೆಟಕಾರ.

‘ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಎಷ್ಟು ಎಂದು ರಾಜ್ಯ ಸರ್ಕಾರ ಕಳೆದ ವರ್ಷ ಮಾಹಿತಿ ಕೇಳಿತ್ತು. ಹಿಂದಿನ ವರ್ಷ ಈ ಜಿಲ್ಲೆಗಳಲ್ಲಿ ಒಟ್ಟು 28,709 ಹುದ್ದೆಗಳು ಖಾಲಿ ಇದ್ದವು. ಇಂದಿಗೂ ಹೊಸ ನೇಮಕಾತಿ ಆಗಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಹೇಳುತ್ತಾರೆ.

‘2014ರ ನವೆಂಬರ್‌ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಹುದ್ದೆಗಳ ಭರ್ತಿಗೆ ನಿರ್ಣಯ ಕೈಗೊಳ್ಳಲಾಗಿತ್ತು. ನಾಲ್ಕು ವರ್ಷಗಳಾದರೂ ಪ್ರಗತಿ ಕಂಡು ಬಂದಿಲ್ಲ. ಈಗಂತೂ ಸರ್ಕಾರ ಮೇಲ್ನೋಟಕ್ಕೆ ಆರ್ಥಿಕ ಮುಗ್ಗಟ್ಟಿನಲ್ಲಿರುವುದು ಕಂಡು ಬರುತ್ತಿದೆ’ ಎನ್ನುತ್ತಾರೆ ಅರಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.