ADVERTISEMENT

ವಚನ ಸಾಹಿತ್ಯ ವಿಶ್ವದ ಸಂವಿಧಾನ

ಬಸವ ಜ್ಯೋತಿ ಕಾರ್ಯಕ್ರಮ: ಮೈಲೂರಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 13:02 IST
Last Updated 13 ಡಿಸೆಂಬರ್ 2019, 13:02 IST
ಬೀದರ್‌ನ ಬಸವ ಮಂಟಪದಲ್ಲಿ ಆಯೋಜಿಸಿದ್ದ ಮಾಸಿಕ ಪೂರ್ಣಿಮಾ ಹಾಗೂ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿದರು
ಬೀದರ್‌ನ ಬಸವ ಮಂಟಪದಲ್ಲಿ ಆಯೋಜಿಸಿದ್ದ ಮಾಸಿಕ ಪೂರ್ಣಿಮಾ ಹಾಗೂ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿದರು   

ಬೀದರ್‌: ‘ವಚನ ಸಾಹಿತ್ಯ ಬಸವಾದಿ ಶರಣರು ವಿಶ್ವಕ್ಕೆ ನೀಡಿದ ಸಂವಿಧಾನವಾಗಿದೆ. ಕಾನೂನಿನಲ್ಲಿ ಇರುವ ಎಲ್ಲ ಕಲಂಗಳಲ್ಲಿನ ಅಂಶಗಳು ವಚನಗಳಲ್ಲಿ ಇವೆ’ ಎಂದು ಪ್ರಾಧ್ಯಾಪಕ ವೀರಶೆಟ್ಟಿ ಮೈಲೂರಕರ್‌ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಮಾಜದ ಸಹಯೋಗದೊಂದಿಗೆ ನಗರದ ಬಸವ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಮಾಸಿಕ ಪೂರ್ಣಿಮಾ ಹಾಗೂ ಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಶರಣರ ವಚನಗಳಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ನೈತಿಕ ಹಾಗೂ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಸಂದೇಶಗಳು ಇವೆ’ ಎಂದು ಹೇಳಿದರು.

ADVERTISEMENT

‘ಫ.ಗು.ಹಳಕಟ್ಟಿ ವಚನಗಳ ಸಂರಕ್ಷಣೆ ಮಾಡಿದ್ದಾರೆ. ಲಿಂಗಾನಂದ ಸ್ವಾಮೀಜಿ ಹಾಗೂ ಮಾತೆ ಮಹಾದೇವಿ ಅವರು ಪ್ರವಚನದ ಮೂಲಕ ವಚನ ಸಾಹಿತ್ಯವನ್ನು ಜನರಿಗೆ ತಲುಪಿಸಿದ್ದಾರೆ’ ಎಂದು ಹೇಳಿದರು.

ಬಸವ ಮಂಟಪದ ಮಾತೆ ಸತ್ಯದೇವಿ ಮಾತನಾಡಿ,‘ವಚನ ಸಾಹಿತ್ಯ ಜೀವನದ ಸಾಹಿತ್ಯವಾಗಿದೆ. ಅದು ಆತ್ಮವಿಶ್ವಾಸ ಮೂಡಿಸಿ, ಧೈರ್ಯದಿಂದ ಬದುಕುವುದನ್ನು ಕಲಿಸುತ್ತದೆ’ ಎಂದರು.

‘ವಚನ ಎಂದರೆ ಭಾಷೆ. ಶರಣರು ಸನ್ಮಾರ್ಗದಲ್ಲಿ ಬದುಕಿ ತೋರಿಸುತ್ತೇನೆ ಎಂದು ದೇವರಿಗೆ ಭಾಷೆ ನೀಡಿ, ಬರೆದ ಸಾಹಿತ್ಯವೇ ವಚನ ಸಾಹಿತ್ಯ. ಇಂತಹ ಪವಿತ್ರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ದೊರಕುತ್ತದೆ’ ಎಂದು ತಿಳಿಸಿದರು.

ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ ಅಧ್ಯಕ್ಷತೆ ವಹಿಸಿದ್ದರು.

ಪ್ರೇಮಾ ಮಠ, ಮನೋಹರ ಹಾಗೂ ಸಂತೋಷಕುಮಾರ ಸುಂಕದ್ ಅವರನ್ನು ಸನ್ಮಾನಿಸಲಾಯಿತು. ಬಸಮ್ಮ ಬಿರಾದಾರ ಬಸವಪೂಜೆ ನೆರವೇರಿಸಿದರು. ಬಸವಕುಮಾರ ಚಟ್ನಳ್ಳಿ ವಚನ ಗಾಯನ ನಡೆಸಿಕೊಟ್ಟರು.

ಗಣಪತಿ ಬಿರಾದಾರ, ಕಲ್ಪನಾ ಸಾವಲೆ, ಅಕ್ಕಮಹಾದೇವಿ ಸ್ವಾಮಿ, ಸಂಜುಕುಮಾರ ಪಾಟೀಲ ಚೊಂಡಿ, ಶೀತಲ್‌ ಸೂರ್ಯವಂಶಿ, ಶ್ರೀದೇವಿ ಹೂಗಾರ, ಮೇನಕಾ ಪಾಟೀಲ, ಕುಶಾಲರಾವ್‌ ಪಾಟೀಲ ಹಾಗೂ ರಾಜೇಂದ್ರಕುಮಾರ ಗಂದಗೆ ಇದ್ದರು.

ಸುರೇಶ ಸ್ವಾಮಿ ನಿರೂಪಿಸಿದರು. ಮಹಾಲಿಂಗ ಸ್ವಾಮಿ ಚಟನಳ್ಳಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.