ADVERTISEMENT

ಬಸವಕಲ್ಯಾಣ| ವಚನಗಳು ಪೋಲಿಯೊ ಹನಿ ಇದ್ದಂತೆ: ಬಸವಲಿಂಗ ಪಟ್ಟದ್ದೇವರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:00 IST
Last Updated 23 ನವೆಂಬರ್ 2025, 7:00 IST
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಸಾಮೂಹಿಕ ಪಾರಾಯಣದ ಉದ್ಘಾಟನೆಯಲ್ಲಿ ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಶಿವಾನಂದ ಕರಾಳೆ ಮತ್ತಿತರರು ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಶನಿವಾರ ನಡೆದ ಸಾಮೂಹಿಕ ಪಾರಾಯಣದ ಉದ್ಘಾಟನೆಯಲ್ಲಿ ಭಾಲ್ಕಿ ಬಸವಲಿಂಗ ಪಟ್ಟದ್ದೇವರು, ಶಿವಾನಂದ ಕರಾಳೆ ಮತ್ತಿತರರು ಪಾಲ್ಗೊಂಡಿದ್ದರು   

ಬಸವಕಲ್ಯಾಣ: ‘ಮಗುವಿಗೆ ಪೋಲಿಯೊ ಹನಿ ಹಾಕಿಸಿದರೆ ಹೇಗೆ ಜೀವನಪರ್ಯಂತ ಅಂಗವೈಕಲ್ಯ ಬರುವುದಿಲ್ಲವೋ ಹಾಗೆ ವಚನಗಳನ್ನು ಪಠಿಸಿ ಅದರಂತೆ ನಡೆದರೆ ಶಾಂತಿ, ನೆಮ್ಮದಿಯಿಂದ ಬದುಕಬಹುದು’ ಎಂದು ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಗರದ ಅಕ್ಕ ಮಹಾದೇವಿ ಕಾಲೇಜು ಆವರಣದಲ್ಲಿ ಅನುಭವ ಮಂಟಪ ಉತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ವಾರದವರೆಗೆ ನಡೆಯುವ ಸಾಮೂಹಿಕ ವಚನ ಪಾರಾಯಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಾದಿ ಶರಣರು ಸಾವಿರಾರು ವಚನಗಳನ್ನು ಬರೆದಿದ್ದಾರೆ. ಮೂಢನಂಬಿಕೆ ಹೋಗಲಾಡಿಸಿ ಜಾಗೃತಿ ಮೂಡಿಸುವುದು ಅವರ ಸದುದ್ದೇಶವಾಗಿತ್ತು. ಕಲ್ಯಾಣ ಕ್ರಾಂತಿ ಘಟಿಸಿದಾಗ ಅನೇಕ ವಚನಗಳು ನಾಶವಾದರೂ ಕೆಲ ಶರಣರು ಗಣಾಚಾರಿಯಾಗಿ ಹೋರಾಡಿ ಅವುಗಳನ್ನು ಸಂರಕ್ಷಿಸಿದ್ದಾರೆ. ಶರಣರು ತ್ಯಾಗ, ಬಲಿದಾನದಿಂದ ಉಳಿಸಿದ ವಚನಗಳನ್ನು ನಿತ್ಯವೂ ಪಠಿಸಿ ಜೀವನ ಹಸನು ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಉದ್ಘಾಟನೆ ನೆರವೇರಿಸಿದ ಬೀದರ್ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮಾತನಾಡಿ, ‘ವಚನಗಳು ಅತ್ಯಮೂಲ್ಯ ಸಾಹಿತ್ಯವಾಗಿದೆ. ಮುಂದಿನ ಪೀಳಿಗೆಗೆ ಇವುಗಳನ್ನು ಪರಿಚಯಿಸಬೇಕಾಗಿದೆ. ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು ಅತ್ಯಗತ್ಯ’ ಎಂದರು.

ಹುಲಸೂರ ಶಿವಾನಂದ ಸ್ವಾಮೀಜಿ, ಗುರುಬಸವ ಪಟ್ಟದ್ದೇವರು, ಸಿದ್ದರಾಮೇಶ್ವರ ಸ್ವಾಮೀಜಿ, ಬೇಲೂರ ಪಂಚಾಕ್ಷರಿ ಸ್ವಾಮೀಜಿ, ಗಂಗಾಬಿಕಾ ಅಕ್ಕ, ಪ್ರಭುದೇವ ಸ್ವಾಮೀಜಿ, ವೈಜನಾಥ ಕಾಮಶೆಟ್ಟಿ, ರವೀಂದ್ರ ಕೊಳಕೂರ ಮತ್ತಿತರರು ಪಾಲ್ಗೊಂಡಿದ್ದರು.

ವಚನ ಕಂಠಪಾಠ ಸ್ಪರ್ಧೆ

ಇಂದು ಅನುಭವ ಮಂಟಪ ಉತ್ಸವದ ಅಂಗವಾಗಿ ನವೆಂಬರ್ 23 ರಂದು ಬೆಳಿಗ್ಗೆ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ ನಡೆಯಲಿದೆ. ಸುಶೀಲಾದೇವಿ ಬಿ.ವಿ.ಪಟೇಲ್ ಸ್ಮರಣಾರ್ಥ ಸ್ಪರ್ಧೆ ಆಯೋಜಿಸಲಾಗಿದೆ. ಎಲ್ಲ ವಯಸ್ಸಿನವರಿಗೂ ಭಾಗವಹಿಸಲು ಅವಕಾಶವಿದೆ. ಹೆಚ್ಚು ವಚನಗಳನ್ನು ಕಂಠಪಾಠ ಹೇಳಿದವರಿಗೆ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗುತ್ತದೆ. ₹ 20000 (ಪ್ರಥಮ) ₹ 15000 (ದ್ವಿತೀಯ) ₹ 10000 (ತೃತೀಯ) ಬಹುಮಾನ ನೀಡಲಾಗುತ್ತದೆ. ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಉದ್ಘಾಟಿಸುವರು. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷತೆ ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.