ADVERTISEMENT

ವಚನ ಸಾಹಿತ್ಯೋತ್ಸವ 2025|ಮನುಧರ್ಮಕ್ಕೆ ಪರ್ಯಾಯ ಕಟ್ಟಿದ್ದೇ ಬಸವಧರ್ಮ:ಬಸವರಾಜ ಸಾದರ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:00 IST
Last Updated 23 ನವೆಂಬರ್ 2025, 7:00 IST
ಬೀದರ್‌ನಲ್ಲಿ ಶನಿವಾರ ನಡೆದ ವಚನ ಸಾಹಿತ್ಯೋತ್ಸವ 2025ಕ್ಕೆ ಬೆಂಗಳೂರಿನ ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ದೀಪ ಬೆಳಗಿಸಿ ಚಾಲನೆ ನೀಡಿದರು
ಬೀದರ್‌ನಲ್ಲಿ ಶನಿವಾರ ನಡೆದ ವಚನ ಸಾಹಿತ್ಯೋತ್ಸವ 2025ಕ್ಕೆ ಬೆಂಗಳೂರಿನ ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ದೀಪ ಬೆಳಗಿಸಿ ಚಾಲನೆ ನೀಡಿದರು   

ಬೀದರ್‌: ‘12ನೇ ಶತಮಾನದ ಬಸವಾದಿ ಶರಣರು ಮನುಧರ್ಮಕ್ಕೆ ಪರ್ಯಾಯವಾಗಿ ಕಟ್ಟಿದ್ದೇ ಮನುಷ್ಯ ಧರ್ಮ, ಬಸವಧರ್ಮ’ ಎಂದು ಬೆಂಗಳೂರಿನ ಆಕಾಶವಾಣಿ ನಿವೃತ್ತ ನಿರ್ದೇಶಕ ಬಸವರಾಜ ಸಾದರ ಹೇಳಿದರು.

ವಚನಾಮೃತ ಕನ್ನಡ ಸಂಘದಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ವಚನ ಸಾಹಿತ್ಯೋತ್ಸವ–2025’ಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಮನುಸ್ಮೃತಿಯನ್ನು ಒಂದು ಸಲ ಓದಿದರೆ ಹೆಣ್ಣು ಮಕ್ಕಳನ್ನು ಎಷ್ಟು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬುದು ಅರ್ಥವಾಗುತ್ತದೆ. ಭೂಮಿ ಮುಖ್ಯವಲ್ಲ, ಬೀಜ ಮುಖ್ಯ ಎಂದು ಅದರಲ್ಲಿ ವರ್ಣಿಸಲಾಗಿದೆ. ಆದರೆ, ಬಸವಾದಿ ಶರಣರು ಅದನ್ನು ಪ್ರತಿಭಟಿಸುತ್ತಾರೆ. ಸಮಾಜದಲ್ಲಿ ಹೆಣ್ಣು ಎರಡನೇ ದರ್ಜೆಯ ಪ್ರಜೆಯಲ್ಲ, ಅವಳು ಪುರುಷನಷ್ಟೇ ಸರಿಸಮಾನಳು ಎಂದು ತೋರಿಸುತ್ತಾರೆ. ಹೀಗಾಗಿಯೇ 12ನೇ ಶತಮಾನದಲ್ಲಿ ಅನೇಕ ಶರಣೆಯರು ವಚನಕಾರ್ತಿಯರಾಗಿ ಹೊರಹೊಮ್ಮಿದರು’ ಎಂದರು.

ADVERTISEMENT

ವಚನಗಳಲ್ಲಿ ಪ್ರತಿಭಟನಾತ್ಮಕ ನೆಲೆಯಿದೆ. ಆ ನಿಟ್ಟಿನಲ್ಲಿ ವಚನಗಳನ್ನು ಓದುವ ಅಗತ್ಯ ಇಂದು ಬಹಳವಿದೆ. ಸತ್ಯಕ್ಕೆ ನಿಷ್ಠೆ ವಚನ ಸಾಹಿತ್ಯದ ಮೂಲ ತಿರುಳು. ವ್ಯಕ್ತಿಯ ನೆಲೆಯ ಬದಲಾವಣೆ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ ಎಂದು ಅದನ್ನು ಅಕ್ಷರಶಃ ಮಾಡಿ ತೋರಿಸಿದವರು ಶರಣರು ಎಂದು ಹೇಳಿದರು.

ಧರ್ಮವನ್ನು ಜ್ಯೋತಿ ಹಾಗೂ ಬೆಂಕಿ ಆಗಿ ಬಳಸಬಹುದು. ಬಸವತತ್ವ ವಿರೋಧಿಸುವವರಿಗೆ ಈ ಧರ್ಮ ಬೆಂಕಿ, ಪರ ಇರುವವರಿಗೆ ಇದು ಬೆಳಕಾಗಿ ಕಾಣುತ್ತದೆ. ಮಠ ಮಾನ್ಯಗಳು ವಚನ ಸಾಹಿತ್ಯವನ್ನು ಧಾರ್ಮಿಕ ಪರಿಪೇಕ್ಷೆ ಹಿನ್ನೆಲೆಯಲ್ಲಿ ನೋಡಿವೆ. ಶೈಕ್ಷಣಿಕ ಹಿನ್ನೆಲೆಯಲ್ಲಿಯೂ ಅಧ್ಯಯನ ಆಗಿದೆ. ಆದರೆ, ವಚನಗಳನ್ನು ನಿಜವಾಗಿ ಅರ್ಥೈಸಿಕೊಳ್ಳುವ ಕೆಲಸವಾಗಿಲ್ಲ. ನಾವೆಲ್ಲ ವಚನಗಳ ಹೊರಭಾಗಕ್ಕೆ ಮಾರು ಹೋಗಿದ್ದೇವೆ ಹೊರತು ಅವುಗಳ ಆಳಕ್ಕೆ ಹೋಗಿಲ್ಲ. ವಚನಗಳ ಆಳಕ್ಕೆ ಹೋಗಿದರೆ ಅವುಗಳ ನಿಜಾರ್ಥ ಗೊತ್ತಾಗುತ್ತದೆ ಎಂದು ತಿಳಿಸಿದರು.

ವಚನಗಳು ಜನ್ಮತಳೆದದ್ದು ಶೋಷಣೆಯ ವಿರುದ್ಧವಾಗಿ. ಆದರೆ, ‘ವಚನ ದರ್ಶನ’ ಗ್ರಂಥ ತಂದು ಕುಕೃತ್ಯ ನಡೆಸಲಾಯಿತು. ಇಡೀ ತಿಂಗಳು ರಾಜ್ಯದಾದ್ಯಂತ ಓಡಾಡಿ ಜಾಗೃತಿ ಮೂಡಿಸಬೇಕಾಯಿತು. ಎಂಟರಿಂದ ಹತ್ತು ಸಾವಿರ ವಚನಗಳಲ್ಲಿ ಪ್ರಶ್ನೆಗಳು, ಪ್ರಶ್ನೆ ಪ್ರಮೇಯಗಳಿವೆ. ಅಷ್ಟು ಪ್ರಶ್ನೆ ಕೇಳುವ ಸ್ಥಿತಿಯಲ್ಲಿ ಇಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ವಚನಗಳಲ್ಲಿ ಸಕಲ ಜೀವಿಗಳಿಗೆ ಲೇಸು ಬಯಸುವ ಶ್ರೇಷ್ಠ ತತ್ವ ಇದೆ. ಇಂತಹ ವಚನಗಳ ಮಹತ್ವದ ಮೇಲೆ ಬೆಳಕು ಚೆಲ್ಲಿ, ಅವುಗಳ ಮಹತ್ವ ತಿಳಿಸಿಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ‘ನಮ್ಮ ಸಂಘ ಎರಡು ವರ್ಷ ಪೂರೈಸಿದಕ್ಕಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಚನ ಸಾಹಿತ್ಯದ ಮಹತ್ವ ಸಾರುವುದು ಇದರ ಉದ್ದೇಶ’ ಎಂದು ಹೇಳಿದರು.

ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ವಾಲಿ, ಎಂಜಿನಿಯರ್‌ ಹಾವಶೆಟ್ಟಿ ಪಾಟೀಲ, ಸಮಾಜ ಸೇವಕರಾದ ನಾಗರಾಜ ಕರ್ಪೂರ, ಸಿದ್ದಪ್ಪ ಜ್ಯಾಂತೆ ಹಾಜರಿದ್ದರು. ಪ್ರವೀಣ ಮ್ಯೂಸಿಕ್‌ ಅಕಾಡೆಮಿ ಮಕ್ಕಳು ನಾಡಗೀತೆ ಹಾಡಿದರು. ವೈಜಿನಾಥ ಸಜ್ಜನಶೆಟ್ಟಿ, ಶಂಭುಲಿಂಗ ವಾಲ್ದೊಡ್ಡಿ ವಚನ ಗಾಯನ ಮಾಡಿದರು. ಜಯದೇವಿ ಯದಲಾಪೂರೆ ನಿರೂಪಿಸಿದರೆ, ಪರಮೇಶ್ವರಯ್ಯ ಸ್ವಾಗತಿಸಿದರು. ಶ್ರೀಕಾಂತ ವಂದಿಸಿದರು.

ಪ್ರಶ್ನಿಸುವುದು ಪ್ರತಿಭಟಿಸುವುದು ನಿರಾಕರಿಸುವುದು ಹಾಗೂ ಪರ್ಯಾಯ ಕಟ್ಟುವುದು ಶರಣ ಧರ್ಮದ ಉದ್ದೇಶ. ಜಗತ್ತಿಗೆ ಮೊಟ್ಟಮೊದಲು ಪ್ರಜಾಪ್ರಭುತ್ವ ಕೊಟ್ಟಿರುವ ಬಸವಧರ್ಮ ಶ್ರೇಷ್ಠವಾದುದು
ಬಸವರಾಜ ಸಾದರ ನಿವೃತ್ತ ನಿರ್ದೇಶಕ ಬೆಂಗಳೂರು ಆಕಾಶವಾಣಿ

ಜೀವನದಲ್ಲಿ ಆಚರಣೆಗೆ ಬರಲಿ

‘ವಚನ ಸಾಹಿತ್ಯದ ಮೂಲತತ್ವ ನಿಜ ಜೀವನದಲ್ಲಿ ಆಚರಣೆಗೆ ಬರಬೇಕು. ಅದರಲ್ಲೂ ಯುವ ಪೀಳಿಗೆಗೆ ಇದರ ಮಹತ್ವ ತಿಳಿಸುವ ಕೆಲಸವಾಗಬೇಕಿದೆ’ ಎಂದು ಶಾಹೀನ್‌ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅಬ್ದುಲ್‌ ಖದೀರ್‌ ತಿಳಿಸಿದರು. ನಮ್ಮ ಯುವಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿದೆ. ದುಶ್ಚಟಗಳ ದಾಸರಾಗುತ್ತಿದ್ದಾರೆ. ಇನ್ನೊಂದು ಕಡೆ ದ್ವೇಷ ಬೆಳೆಸಲಾಗುತ್ತಿದೆ. ಇದರಿಂದ ಅವರನ್ನು ಹೊರತರುವ ಕೆಲಸವಾಗಬೇಕು ಎಂದು ಹೇಳಿದರು.

‘ಕೇಂದ್ರಕ್ಕೆ ಹಿಂದಿ ರಾಜ್ಯಕ್ಕೆ ಇಂಗ್ಲಿಷ್‌ ಪ್ರೀತಿ’

‘ಕೇಂದ್ರ ಸರ್ಕಾರಕ್ಕೆ ಹಿಂದಿ ಮೇಲೆ ಪ್ರೀತಿ ಇದ್ದರೆ ರಾಜ್ಯ ಸರ್ಕಾರಕ್ಕೆ ಇಂಗ್ಲಿಷ್‌ ಮೇಲೆ ಪ್ರೀತಿ ಬೆಳೆಯುತ್ತಿದೆ. ಇದರ ನಡುವೆ ಕನ್ನಡದ ಕತ್ತು ಹಿಚುಕಲಾಗುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಕಳವಳ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಎಲ್ಲಾ ಕಡೆಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಹೆಸರಲ್ಲಿ ಆಂಗ್ಲ ಭಾಷೆಯ ಶಾಲೆ ತೆರೆದು ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಮಾಡುತ್ತಿದೆ. ಇದನ್ನು ತಡೆಯುವ ಕೆಲಸ ಮಾಡಬೇಕಿದೆ. ಕನ್ನಡವನ್ನು ದೈವಭಾಷೆ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅಂತಹ ಭಾಷೆಯ ಮಹತ್ವ ತಿಳಿದು ಉಳಿಸಬೇಕಾಗಿದೆ. ಒಂದು ಭಾಷೆ ಸತ್ತು ಹೋದರೆ ಒಂದು ಜನಾಂಗ ಸತ್ತು ಹೋದಂತೆ ಎಂಬುದನ್ನು ಯಾರೂ ಮರೆಯಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.