ಬೀದರ್: ಬಸವ ಸೇವಾ ಪ್ರತಿಷ್ಠಾನದಿಂದ ಫೆ.10ರಿಂದ 12ರವರೆಗೆ ನಗರದ ಬಸವಗಿರಿಯಲ್ಲಿ ಹಮ್ಮಿಕೊಂಡಿರುವ ‘ವಚನ ವಿಜಯೋತ್ಸವ’ ಕಾರ್ಯಕ್ರಮದ ಪ್ರಚಾರಕ್ಕೆ ಇಲ್ಲಿನ ಶರಣ ಉದ್ಯಾನದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಅಕ್ಕ ಗಂಗಾಂಬಿಕೆ,‘ವಚನ ವಿಜಯೋತ್ಸವದ ಅಂಗವಾಗಿ ಫೆಬ್ರುವರಿಯಲ್ಲಿ ಮೂರು ದಿನ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ. ವಚನ ಸಾಹಿತ್ಯ ಸಂರಕ್ಷಣೆಯ ಐತಿಹಾಸಿಕ ಘಟನೆಯನ್ನು ನಮ್ಮ ಯುವ ಜನಾಂಗಕ್ಕೆ ತಲುಪಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಹೇಳಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ,‘ಪ್ರತಿಯೊಬ್ಬರೂ ಮನೆಯ ಕಾರ್ಯಕ್ರಮ ಎಂದು ತಿಳಿದು ಯಶಸ್ವಿಗೊಳಿಸಬೇಕು. ಪ್ರಚಾರ ಕೂಡ ವ್ಯಾಪಕವಾಗಿ ಮಾಡಬೇಕು’ ಎಂದರು.
ಭಾರತೀಯ ಬಸವ ಬಳಗದ ರಾಜ್ಯ ಅಧ್ಯಕ್ಷ ಬಾಬು ವಾಲಿ ಮಾತನಾಡಿ,‘ವಚನ ವಿಜಯೋತ್ಸವ ದಸರಾ ಉತ್ಸವದ ಮಾದರಿಯಲ್ಲಿ ಆಚರಿಸಬೇಕು. ಬಸವ ಸಂಸ್ಕೃತಿಯ ಪುನರುತ್ಥಾನಕ್ಕೆ ಎಲ್ಲರೂ ಸಮಯ ಕೊಡಬೇಕು’ ಎಂದು ತಿಳಿಸಿದರು.
ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕಾಜಿ, ಶಕುಂತಲಾ ಬೆಲ್ದಾಳೆ, ಉಷಾ ಚಂದ್ರಕಾಂತ ಮಿರ್ಚೆ, ಧನರಾಜ ಹಂಗರಗಿ, ರಾಜೇಂದ್ರ ಕುಮಾರ ಗಂದಗೆ, ಜೈರಾಜ ಖಂಡ್ರೆ, ರಾಜಕುಮಾರ ಮಣಿಗೇರೆ, ಸುರೇಶ ಸ್ವಾಮಿ, ಸಿದ್ರಾಮಪ್ಪ ಕಪಲಾಪುರೆ, ಸುವರ್ಣ ಶರಣಪ್ಪ ಚಿಮಕೋಡೆ, ಯದಲಾಪುರ ಪಿಕೆಪಿಎಸ್ ಅಧ್ಯಕ್ಷ ಸಂತೋಷ ಪಾಟೀಲ ಹಾಗೂ ಪತ್ರಕರ್ತ ಆದೀಶ ವಾಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.