
ಭಾಲ್ಕಿ: ‘ವಚನಗಳು ಶ್ರೇಷ್ಠ ಮಂತ್ರಗಳು, ನೆಮ್ಮದಿಯ ಬದುಕಿನ ಸೂತ್ರಗಳು. ವಚನಗಳನ್ನು ತಲೆ ಮೇಲೆ ಹೊತ್ತು ವಚನ ವಿಜಯೋತ್ಸವವನ್ನು ಆಚರಿಸಿ ವಚನಗಳಿಗೆ ಪಟ್ಟಕಟ್ಟಿದ ಕೀರ್ತಿ ಅಕ್ಕ ಅನ್ನಪೂರ್ಣತಾಯಿಗೆ ಸಲ್ಲುತ್ತದೆ’ ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.
ಸಿದ್ದಾಪುರವಾಡಿಯಲ್ಲಿ ನಡೆದ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ, 17ನೇ ವಚನ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಅಕ್ಕ ಅನ್ನಪೂರ್ಣತಾಯಿ ಸರಳತೆಯ ಸಾಕಾರ ಮೂರ್ತಿ ಆಗಿದ್ದರು. ಜಿಲ್ಲೆಯ ಕೀರ್ತಿ ನಾಡಿನಾದ್ಯಂತ ಹಬ್ಬಿಸಿದ್ದರು. ವಚನ ಪಠಣ ಅಭಿಯಾನ, ಶಿವಯೋಗ ಸಾಧಕರ ಕೂಟ, ಬಸವ ಭಾರತಿ ಸಂಸ್ಕಾರ ಶಿಬಿರ, ವಚನ ವಿಜಯೋತ್ಸವ ಕಾರ್ಯಕ್ರಮ ಮಾಡುತ್ತಾ ಶರಣತತ್ವ ಜನ ಮಾನಸದಲ್ಲಿ ಬಿತ್ತಿದರು’ ಎಂದು ತಿಳಿಸಿದರು.
‘ಅಕ್ಕನವರ ಸಂಕಲ್ಪದಂತೆ ಹಳ್ಳಿ ಹಳ್ಳಿಗಳಲ್ಲಿ ವಚನ ವಿಜಯೋತ್ಸವ ಆಚರಿಸುವ ಸಂಕಲ್ಪದೊಂದಿಗೆ 770 ಪ್ರವಚನಗಳನ್ನು ಮಾಡುತ್ತಾ ಶರಣರ ತ್ಯಾಗ, ಬಲಿದಾನದ ವೀರಗಾಥೆ ಸಾರುವ ಸಂಕಲ್ಪ ತೊಟ್ಟಿದ್ದೇವೆ’ ಎಂದು ತಿಳಿಸಿದರು.
ರಾಜಕುಮಾರ ಪಾಟೀಲ, ಸಾಹಿತಿ ರಮೇಶ ಮಠಪತಿ, ಪ್ರಕಾಶ ಮಠಪತಿ, ಅಣವೀರ ಕೋಡಂಬಲ್, ಸಿ.ಎಸ್.ಗಣಾಚಾರಿ, ಅಶೋಕ ಎಲಿ, ಆರ್.ಕೆ.ಪಾಟೀಲ, ಶಿವಕುಮಾರ ಪಾಟೀಲ, ಸಿದ್ದರಾಮಪ್ಪ ಕಪಲಾಪುರೆ, ಸಂಜು ಕುಮಾರ, ಸಿದ್ದರಾಮಪ್ಪ ಪಾಟೀಲ, ಮಾಣಿಕಪ್ಪ ಗೋರನಾಳೆ, ಸಂಗಮೇಶ ಪಾಟೀಲ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.