ADVERTISEMENT

ಆವಕ ಹೆಚ್ಚಳ; ಕುಸಿದ ತರಕಾರಿ ಬೆಲೆ

ಖಾಟು ಹೆಚ್ಚಿಸಿಕೊಂಡ ಮೆಣಸಿನಕಾಯಿ; ಕಿರೀಟ ಕೆಳಗಿಳಿಸಿದ ತರಕಾರಿ ರಾಜ

ಚಂದ್ರಕಾಂತ ಮಸಾನಿ
Published 26 ಮಾರ್ಚ್ 2022, 19:31 IST
Last Updated 26 ಮಾರ್ಚ್ 2022, 19:31 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ/ ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ/ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್: ನೆರೆಯ ಜಿಲ್ಲೆಗಳಿಂದ ಏಕಕಾಲದಲ್ಲಿ ತರಕಾರಿ ಹೆಚ್ಚಿನ ಪ್ರಮಾಣದಲ್ಲಿ ಬೀದರ್‌ ಮಾರುಕಟ್ಟೆಗೆ ಬಂದ ಕಾರಣ ಅನೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಆದರೆ, ಹಸಿ ಮೆಣಸಿನಕಾಯಿ ಮಾತ್ರ ಖಾರ ಹೆಚ್ಚಿಸಿಕೊಂಡಿದೆ. ತರಕಾರಿ ರಾಜ ತನ್ನ ಕಿರೀಟ ಕೆಳಗಿಳಿಸಿದೆ.

ಪ್ರತಿ ಕ್ವಿಂಟಲ್‌ ಬೆಂಡೆಕಾಯಿ, ಬೀನ್ಸ್‌ ಹಾಗೂ ಕರಿಬೇವು ಬೆಲೆ ₹ 2 ಸಾವಿರ ಏರಿಕೆಯಾಗಿದೆ. ತೊಂಡೆಕಾಯಿ, ಚವಳೆಕಾಯಿ, ಮೆಂತೆಸೊಪ್ಪು ₹ 1 ಸಾವಿರ ಹೆಚ್ಚಾಗಿದೆ.

ಚಳಿಗಾಲದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 1,200ಇದ್ದ ನುಗ್ಗೆಕಾಯಿ ಬೆಲೆ ಬೇಸಿಗೆ ಆರಂಭವಾದ ನಂತರ ಅರ್ಧದಷ್ಟು ಅಂದರೆ ₹ 6 ಸಾವಿರಕ್ಕೆ ಇಳಿದಿದೆ. ಬೀಟ್‌ರೂಟ್‌ ಬೆಲೆ ₹ 4 ಸಾವಿರ, ಬೆಳ್ಳುಳ್ಳಿ ₹ 3 ಸಾವಿರ, ಹಿರೇಕಾಯಿ ₹ 2 ಸಾವಿರ, ಬದನೆಕಾಯಿ, ಎಲೆಕೋಸು ₹ 1 ಸಾವಿರ ಇಳಿಕೆಯಾಗಿದೆ.

ADVERTISEMENT

ಟೊಮೆಟೊ ಬೆಲೆ ಶೇಕಡ 50ರಷ್ಟು ಕುಸಿದಿದೆ. ಗುಣಮಟ್ಟದ ಟೊಮೆಟೊ ಕೆ.ಜಿಗೆ ₹ 10ರಂತೆ ಮಾರಾಟವಾದರೆ, ಚಿಕ್ಕ ಗಾತ್ರದ ಎರಡನೇ ದರ್ಜೆಯ ಟೊಮೆಟೊ ₹ 5ಗೆ ಮಾರಾಟವಾಗುತ್ತಿದೆ.

ಈರುಳ್ಳಿ, ಮೆಣಸಿನಕಾಯಿ, ಆಲೂಗಡ್ಡೆ, ಗಜ್ಜರಿ, ಡೊಣ ಮೆಣಸಿನಕಾಯಿ, ಹೂಕೋಸು, ಸಬ್ಬಸಗಿ, ಕೊತಂಬರಿ ಹಾಗೂ ಪಾಲಕ್‌ ಬೆಲೆ ಸ್ಥಿರವಾಗಿದೆ. ನಿತ್ಯ ಬಿಸಿಲು ಹೆಚ್ಚುತ್ತಿರುವ ಕಾರಣ ಹೆಚ್ಚು ಸೊಪ್ಪು ಮಾರುಕಟ್ಟೆಗೆ ಬರುತ್ತಿಲ್ಲ. ಗ್ರಾಮಾಂತರ ಪ್ರದೇಶದಿಂದ ಸ್ವಲ್ಪ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದರೂ ತಕ್ಷಣ ಖಾಲಿಯಾಗುತ್ತಿದೆ.

‘ಬಿಸಿಲು ಹೆಚ್ಚುತ್ತಿರುವ ಕಾರಣ ಸಹಜವಾಗಿಯೇ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ. ಉಳಿದ ತರಕಾರಿಗಳ ಬೆಲೆ ನಿಧಾನವಾಗಿ ಹೆಚ್ಚುತ್ತಿದೆ. ಬರುವ ಎರಡು ತಿಂಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಳವಾಗಲಿದೆ. ಟೊಮೊಟೊ ಬೆಲೆ ಈಗ ಕಡಿಮೆ ಇದೆ. ಆದರೆ, ಎರಡು ವಾರಗಳ ನಂತರ ಅದರ ಬೆಲೆಯೂ ಹೆಚ್ಚಾದರೆ ಅಚ್ಚರಿ ಇಲ್ಲ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಹೈದರಾಬಾದ್‌ನಿಂದ ಹಿರೇಕಾಯಿ, ಡೊಣ ಮೆಣಸಿನಕಾಯಿ, ಬದನೆಕಾಯಿ, ತೊಂಡೆಕಾಯಿ, ಚವಳೆಕಾಯಿ, ಗಜ್ಜರಿ, ಬೀಟ್‌ರೂಟ್‌ ಬೀದರ್‌ ತರಕಾರಿ ಮಾರುಕಟ್ಟೆಗೆ ಆವಕವಾಗಿದೆ. ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಹಾಗೂ ಬೀದರ್ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕರಿಬೇವು ಮಾರುಕಟ್ಟೆಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.