ADVERTISEMENT

ಅಗತ್ಯ ಸಿಬ್ಬಂದಿ ಕೋರಿದ್ದಕ್ಕೆ ಕುಲಸಚಿವ ವರ್ಗಾವಣೆ

ಕೆಎಸ್‌ಒಯು ಪ್ರಾದೇಶಿಕ ಕೇಂದ್ರದ ಕೊಠಡಿಗೆ ನಾಲ್ವರು ಡಿ ದರ್ಜೆ ಸಿಬ್ಬಂದಿ

ಚಂದ್ರಕಾಂತ ಮಸಾನಿ
Published 8 ಜೂನ್ 2022, 3:00 IST
Last Updated 8 ಜೂನ್ 2022, 3:00 IST

- ಚಂದ್ರಕಾಂತ ಮಸಾನಿ

ಬೀದರ್‌: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರವು ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 20X40 ಚದರ ಅಡಿಯ ಕೊಠಡಿಯಲ್ಲಿ ಆರಂಭವಾಗಿ ವರ್ಷವಾಗಿದೆ. ನಾಲ್ವರು ‘ಡಿ’ ದರ್ಜೆ ನೌಕರರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಕೆಲಸಕ್ಕೆ ಅಗತ್ಯವಿರುವ ಸಿಬ್ಬಂದಿ ನೀಡಲು ಕೋರಿದ್ದಕ್ಕೆ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವರನ್ನೇ ವರ್ಗಾವಣೆ ಮಾಡಲಾಗಿದೆ.

ಪ್ರಾದೇಶಿಕ ಕಚೇರಿ ಆರಂಭವಾದರೂ ಸಿಬ್ಬಂದಿಯನ್ನು ನಿಯೋಜಿಸಿರಲಿಲ್ಲ. ಕಚೇರಿಯ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಿದ್ದ ಸಹಾಯಕ ಕುಲಸಚಿ ಸತೀಶ ಕುಲಕರ್ಣಿ ಅವರು ಹೊರ ಹೋಗುವ ಸಂದರ್ಭದಲ್ಲಿ ಕಚೇರಿಗೆ ಬೀಗ ಹಾಕಬೇಕಿತ್ತು.

ADVERTISEMENT

ಕಚೇರಿಗೆ ಒಬ್ಬ ಡಿಟಿಪಿ ಆಪರೇಟರ್/ ಕ್ಲರ್ಕ್ ಮತ್ತು ಸಿಪಾಯಿ ಕೊಡುವಂತೆ ಅವರು ಕುಲಪತಿಗೆ ಪತ್ರ ಬರೆದಿದ್ದರು. 371(ಜೆ) ಅನ್ವಯ ಸ್ಥಳೀಯರನ್ನೇ ನೇಮಿಸಬೇಕು. ಆದರೆ, ಮೈಸೂರಿನಿಂದ ಒಬ್ಬರನ್ನು ಕಳಿಸಿಕೊಡಲಾಗಿದೆ. ಇದಾದ ಎರಡು ತಿಂಗಳ ನಂತರ ಮತ್ತೆ ಮೂವರು ‘ಡಿ’ ದರ್ಜೆ ನೌಕರರನ್ನು ಇಲ್ಲಿಗೆ ನೇಮಿಸಲಾಗಿದೆ.

‘ಒಂದು ಕೊಠಡಿಗೆ ನಾಲ್ವರು ‘ಡಿ’ ದರ್ಜೆ ನೌಕರರು ಅಗತ್ಯವಿಲ್ಲ. ಒಬ್ಬ ‘ಡಿ’ ದರ್ಜೆ ನೌಕರ ಸಾಕು. ಮೂವರನ್ನು ವಾಪಸ್ ಕರೆಸಿಕೊಂಡು ಅವರ ಬದಲು ಕೆಲಸಕ್ಕೆ ಅಗತ್ಯ ಇರುವವರನ್ನು ನೇಮಿಸಲು ಕೋರಿದ್ದೆ. ಈಗ ನನ್ನನ್ನು ಕಾರವಾರಕ್ಕೆ ವರ್ಗಾವಣೆ ಮಾಡಲಾಗಿದೆ’ ಎಂದು ಸಹಾಯಕ ಕುಲಸಚಿವ ಸತೀಶ ಕುಲಕರ್ಣಿ
ಹೇಳುತ್ತಾರೆ.

ವಿಶ್ವವಿದ್ಯಾಲಯದ ಬೇರೆ ಸಿಬ್ಬಂದಿ ಇರದ ಕಾರಣ ಯಾರಿಗೆ ಜವಾಬ್ದಾರಿ ವಹಿಸಬೇಕು ಎಂಬುದರ ಬಗ್ಗೆ ಸಮರ್ಪಕ ಮಾಹತಿ ಅವರಿಗೆ ನೀಡಲಾಗಿಲ್ಲ. ಕುಲಪತಿಗೆ ಪತ್ರ ಬರೆದರೂ ಇನ್ನೂ ಉತ್ತರ
ಬಂದಿಲ್ಲ.

ಬೀದರ್‌ನ ಪ್ರಾದೇಶಿಕ ಕಚೇರಿಯಲ್ಲಿ ಪ್ರತಿ ವರ್ಷ 300ರಿಂದ 400 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ದಾಖಲೆಗಳ ಸಂಗ್ರಹಣೆ, ಕೇಂದ್ರ ಕಚೇರಿಗೆ ಮಾಹಿತಿ ಕಳಿಸಿಕೊಡುವುದು, ಪರೀಕ್ಷೆ ನಡೆಸುವುದು ಸೇರಿ ಹಲವು ಕೆಲಸಗಳು ಇರುತ್ತವೆ. ಈಗ ಸಹಾಯಕ ಕುಲಸಚಿವ ವರ್ಗಾವಣೆಯಾದ ಕಾರಣ ಹಲವು ಸಮಸ್ಯೆಗಳು
ಎದುರಾಗಿವೆ.

‘ಒಂದು ಚಿಕ್ಕ ಕೊಠಡಿಗೆ ನಾಲ್ವರು ‘ಡಿ’ ದರ್ಜೆ ನೌಕರರನ್ನು ನೇಮಿಸಿರುವುದು ಹಲವು ಸಂಶಯಗಳಿಗೆ ಆಸ್ಪದ ನೀಡಿದೆ. ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಸರ್ಕಾರ ವಿಶ್ವವಿದ್ಯಾಲಯಗಳಿಗೆ ಭ್ರಷ್ಟರನ್ನು ನೇಮಿಸಿಕೊಳ್ಳುತ್ತಿರುವ ಕಾರಣ ಇಂತಹ ಪ್ರಮಾದಗಳು ನಡೆಯುತ್ತಿವೆ‘ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.