
ಹುಮನಾಬಾದ್: ಪಟ್ಟಣದಲ್ಲಿ ನಡೆಯುತ್ತಿರುವ ವೀರಭದ್ರೇಶ್ವರ ಜಾತ್ರೆ ನಿಮಿತ್ತ ದರ್ಶನಕ್ಕೆ ಸೋಮವಾರ ಜನಸಾಗರ ಹರಿದು ಬಂದಿತ್ತು. ಪಟ್ಟಣದ ಥೇರು ಮೈದಾನದಿಂದ ವೀರಭದ್ರೇಶ್ವರ ದೇವಸ್ಥಾನದ ರಸ್ತೆಯುದ್ದಕ್ಕೂ ಜನ ಸೇರಿದ್ದರು. ಸೋಮವಾರ ನಸುಕಿನ ಜಾವ ಹಿರೇಮಠ ಸಂಸ್ಥಾನದ ಪೀಠಾಧಿಪತಿ ರೇಣುಕವೀರ ಗಂಗಾಧರ ಶಿವಾಚಾರ್ಯರು ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿ ಅಗ್ನಿ ತುಳಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶನಿವಾರ ರಾತ್ರಿ ದೇವಸ್ಥಾನದಿಂದ ಹೊರಟ ವೀರಭದ್ರೇಶ್ವರ ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಮೆರವಣಿಗೆ ನಾಗಣ್ಣ ಕಟ್ಟಿ, ಬಸವೇಶ್ವರರ ವೃತ್ತ, ಬಾಲಾಜಿ ಮಂದಿರ, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಐತಿಹಾಸಿಕ ವೀರಭದ್ರೇಶ್ವರ ಅಗ್ನಿ ಕುಂಡಕ್ಕೆ ತಲುಪಿತು.
ಮೆರವಣಿಗೆಯ ಯೂದ್ದಕ್ಕೂ ಭಜನೆ, ವಾಧ್ಯಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಉತ್ಸವ ಮೂರ್ತಿ ಹಾಗೂ ಪಲ್ಲಕ್ಕಿ ಸುತ್ತಮುತ್ತಲೂ ಸುತ್ತುವರಿದ ಭಕ್ತರು ವೀರಭದ್ರೇಶ್ವರ ದೇವರಿಗೆ ಜಯ ಘೋಷ ಕೊಗಿದರು. ಮೆರವಣಿಗೆಯಲ್ಲಿ ಸಿಡಿಮದ್ದುಗಳು ನೋಡುಗರರ ಕಣ್ಮನ ಸೆಳೆಯುವಂತಿತ್ತು.
ಅಗ್ನಿ ತುಳಿದ ಭಕ್ತರು: ಅಗ್ನಿ ತುಳಿಯುವ ಕಾರ್ಯಕ್ರಮದಲ್ಲಿ ಜನರ ನೂಕುನುಗ್ಗಲು ಉಂಟಾಯಿತು. ಇಲ್ಲಿನ ಅಂಬೇಡ್ಕರ್ ವೃತ್ತ ಮತ್ತು ಕಲ್ಲೂರ ರಸ್ತೆಯ ದೂರದವರೆಗೆ ಅಗ್ನಿಕುಂಡ ತುಳಿಯಲು ಜನರು ಸರದಿಯಲ್ಲಿ ನಿಂತಿದ್ದರು.
ಒಂದು ಬಾರಿ ಜಾತ್ರೆಯಲ್ಲಿ ಅಗ್ನಿ ತುಳಿದವರು ಮೂರು ವರ್ಷ ಮುಂದುವರಿಸುವ ವಾಡಿಕೆಯಿರುವುದರಿಂದ ಸಾವಿರಾರು ಜನರು ಅಗ್ನಿಕುಂಡದ ಸುತ್ತ ನೆರೆದಿದ್ದರು. ಕುಂಡದಲ್ಲಿ ಚಕ್ಕಿಗಳನ್ನು ಎಸೆದು ಸುತ್ತು ಹಾಕಿ ಹರಕೆ ಪೂರೈಸಿದರು. ಮಹಾರಾಷ್ಟ್ರ ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕ ರಾಜ್ಯದ ನಾನಾ ಜಿಲ್ಲೆಯ ಭಕ್ತರು ಅಲ್ಲದೇ ಹುಮನಾಬಾದ್, ಚಿಟಗುಪ್ಪ, ಬಸವಕಲ್ಯಾಣ, ಭಾಲ್ಕಿ ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಯ ಜನರು ಸರತಿ ಸಾಲಿನಲ್ಲಿ ನಿಂತು ಅಗ್ನಿ ತುಳಿದು ಹರಕೆ ತೀರಿಸಿದರು. ಅಗ್ನಿ ತುಳಿಯುವ ಕಾರ್ಯಕ್ರಮದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಪಾಟೀಲ, ಸಂತೋಷ್ ಪಾಟೀಲ, ಸುನೀಲ ಪಾಟೀಲ ಸೇರಿದಂತೆ ಇತರರು ಇದ್ದರು.
ಅನ್ನದಾಸೋಹ: ಜಾತ್ರೆಗೆ ಆಗಮಿಸಿದ ರಾಜ್ಯ ಹಾಗೂ ಹೊರರಾಜ್ಯದ ಭಕ್ತರಿಗಾಗಿ ಸರ್ಕಾರಿ ನೌಕರಸ್ಥರು, ವ್ಯಾಪಾರಸ್ಥರು ವಿವಿಧ ಸಂಘ ಸಂಸ್ಥೆಗಳಿಂದ ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ, ಪಿಆರ್‌ಇ ಕಚೇರಿ, ರಥ ಮೈಧಾನ, ಬಸವೇಶ್ವರರ ವೃತ್ತ, ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತ ಸೇರಿದಂತೆ ಪಟ್ಟಣದ ಬಹುತೇಕ ಕಡೆಗಳಲ್ಲಿ ಅನ್ನದಾಸೋಹ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅನ್ನದಾಸೋಹದಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ವೀರಭದ್ರೇಶ್ವರ ಜಾತ್ರೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧಡೆ ಸುಮಾರು ಸಿಪಿಐ ಪಿಎಸ್ಐ ಸೇರಿದಂತೆ 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯಿಂದ ಬಂದೋಬಸ್ತ್ ಕಲ್ಪಿಸಲಾಗಿದೆ ಮಡೋಳಪ್ಪ ಡಿವೈಎಸ್ಪಿ ಹುಮನಾಬಾದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.