ಬಸವಕಲ್ಯಾಣ (ಬೀದರ್ ಜಿಲ್ಲೆ): ನಗರದಲ್ಲಿ 10 ದಿನಗಳಿಂದ ನಡೆದ 34ನೇ ದಸರಾ ಧರ್ಮ ಸಮ್ಮೇಳನ ಗುರುವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ವೈಭವದ ಅಡ್ಡಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಮಾರೋಪಗೊಂಡಿತು.
ತೆರೆದ ವಾಹನಕ್ಕೆ ಪುಷ್ಟಗಳಿಂದ ಅಲಂಕೃತಗೊಳಿಸಿ ಹಾವಿನ ಹೆಡೆಯ ಚಿತ್ರಾವಳಿ ಇರುವ ಅಡ್ಡ ಪಲ್ಲಕ್ಕಿ ಇಡಲಾಗಿತ್ತು. ರಂಭಾಪುರಿಶ್ರೀಯವರು ಚಿನ್ನದ ಕಿರೀಟ ಹಾಕಿಕೊಂಡು ಅದರಲ್ಲಿ ಕುಳಿತು ಅಭಯಹಸ್ತ ತೋರುತ್ತ ಸಾಗಿದರು. ಪ್ರಸಿದ್ಧ ಬಸವೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ತೇರು ಮೈದಾನದ ಬನ್ನಿ ಮಂಟಪದ ಸ್ಥಳ ತಲುಪಿತು.
ಆನೆಯೂ ಹೆಜ್ಜೆ ಹಾಕುತ್ತ ಸಾಗಿತ್ತು. ಡೊಳ್ಳು ಕುಣಿತ, ಬ್ಯಾಂಡ್ ಬಾಜಾ, ಹಲಿಗೆ ವಾದನ ಮತ್ತಿತರೆ ವಾದ್ಯ ಮೇಳದವರು, ಭಜನಾ ತಂಡ, ಲಂಬಾಣಿ ಕುಣಿತ, ಕೋಲಾಟ ಮತ್ತಿತರೆ ಜಾನಪದ ನೃತ್ಯ ತಂಡದವರು ಪಾಲ್ಗೊಂಡಿದ್ದರು. ಭಾಗವಹಿಸಿದ್ದವರು ಬಿಳಿ ವಸ್ತ್ರಗಳನ್ನು ಹಾಗೂ ತಲೆಮೇಲೆ ಭಗವಾ ಟೊಪ್ಪಿಗೆ ಹಾಕಿಕೊಂಡು ಜೈಘೋಷ ಹಾಕುತ್ತ ಪಾಲ್ಗೊಂಡಿದ್ದರು. ಪಂಚಾಚಾರ್ಯ ಧ್ವಜ, ಭಗವಾ ಧ್ವಜಗಳನ್ನು ಹಿಡಿಯಲಾಗಿತ್ತು. ಯುವಕರು ಹರ್ಷದಿಂದ ಕುಣಿದರು.
ಹಾರಕೂಡ ಚನ್ನವೀರ ಶಿವಾಚಾರ್ಯರು, ತಡೋಳಾ ರಾಜೇಶ್ವರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಶರಣು ಸಲಗರ, ಕಾರ್ಯಕ್ರಮ ಸಮಿತಿ ಪ್ರಮುಖರಾದ ಸುನಿಲ ಪಾಟೀಲ, ಸುರೇಶ ಸ್ವಾಮಿ, ದಯಾನಂದ ಶೀಲವಂತ, ಸೂರ್ಯಕಾಂತ ಶೀಲವಂತ, ವೀರಣ್ಣ ಶೀಲವಂತ, ಚಂದ್ರಶೇಖರ ಪಾಟೀಲ ಸೇರಿ ಸಮಿತಿಯ ಮುಖಂಡರು ಪಾಲ್ಗೊಂಡಿದ್ದರು.
ಬಸವೇಶ್ವರ ಮಂದಿರದಿಂದ ಹೊರಟ ಮೆರವಣಿಗೆ | ಮೆರವಣಿಗೆಗೆ ವಾದ್ಯ ಮೇಳದವರ ಮೆರುಗು | ಅನೇಕ ಮಠಾಧೀಶರು ಭಾಗವಹಿಸಿದ್ದರು
ತಲೆಮೇಲೆ ಕುಂಭ ಕಲಶ ಹೊತ್ತ ರಂಭಾಪುರಿಶ್ರೀ
ದಸರಾ ಧರ್ಮ ಸಮ್ಮೇಳನದ ಅಂಗವಾಗಿ ಗುರುವಾರ ಬೆಳಿಗ್ಗೆ ಬಿಕೆಡಿಬಿ ಸಭಾಂಗಣದಲ್ಲಿ ನಡೆದ ಇಷ್ಟಲಿಂಗ ಮಹಾಪೂಜೆಗೂ ಮೊದಲು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಸ್ವತಃ ತಲೆಮೇಲೆ ಕುಂಭ ಕಲಶ ಹೊತ್ತುಕೊಂಡು ಪಾದಯಾತ್ರೆಯ ಮೂಲಕ ಅಗ್ರೋದಕ ನೀರು ತಂದರು. ಸದಾನಂದಸ್ವಾಮಿ ಮಠದಿಂದ ಬಸವೇಶ್ವರ ವೃತ್ತದ ಮೂಲಕ ಪೂಜೆಯ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು. ಅನೇಕ ಮಹಿಳೆಯರು ಸಹ ಕುಂಭಗಳನ್ನು ಹೊತ್ತುಕೊಂಡು ಪಾಲ್ಗೊಂಡಿದ್ದರು. ಬಳೀಕ ಆಶೀರ್ವಚನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.