ADVERTISEMENT

ಬೆಲೆ ಏರಿಕೆ: ಬೇಸಿಗೆಯಲ್ಲಿ ಮತ್ತಷ್ಟು ಖಾರ ಹೆಚ್ಚಿಸಿದ ಮೆಣಸಿನಕಾಯಿ

ಏರಿದ ಡೊಣಮೆಣಸಿನಕಾಯಿ, ಇಳಿದ ಹಿರೇಕಾಯಿ

ಚಂದ್ರಕಾಂತ ಮಸಾನಿ
Published 19 ಏಪ್ರಿಲ್ 2022, 19:30 IST
Last Updated 19 ಏಪ್ರಿಲ್ 2022, 19:30 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್: ಜಿಲ್ಲೆಯಲ್ಲಿ ಕೋವಿಡ್‌ ತೊಲಗಿದ ನಂತರ ಮಹಾಪುರುಷರ ಜಯಂತಿ, ಜಾತ್ರೆ, ಉರುಸ್ ಹಾಗೂ ಮದುವೆ ಸಮಾರಂಭಗಳು ಭರ್ಜರಿಯಾಗಿಯೇ ನಡೆದಿವೆ. ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿತರಣೆ ಕಾರ್ಯ ನಿರಂತರವಾಗಿ ಸಾಗಿದೆ. ಬೆಂಕಿ ಬಿಸಿಲಿಗೆ ತರಕಾರಿಗಳು ಬೇಗ ಬಾಡುತ್ತಿವೆ. ಸಮಾರಂಭಗಳ ಆಯೋಜಕರು ಹೇಳಿದಷ್ಟು ಹಣ ಕೊಟ್ಟು ತರಕಾರಿ ಒಯ್ಯಲು ಶುರು ಮಾಡಿದ್ದಾರೆ. ಹೀಗಾಗಿ ಪ್ರಮುಖ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ಯಾವುದೇ ಧಾರ್ಮಿಕ ಕಾರ್ಯಕ್ರಮ ಇರಲಿ ಅಡುಗೆಗೆ ಹಸಿ ಮಣಸಿನಕಾಯಿ ಬೇಕೇ ಬೇಕು. ಹೊರ ಜಿಲ್ಲೆಗಳಿಂದ ಬೀದರ್ ಮಾರುಕಟ್ಟೆಗೆ ಬರುತ್ತಿರುವ ಗುಣಮಟ್ಟದ ಮೆಣಸಿನಕಾಯಿ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಬೆಳಗಾಗುವುದರಲ್ಲಿ ಮಾರಾಟವಾಗುತ್ತಿದೆ. ಗರಿಷ್ಠ ಲಾಭ ರೈತರ ಕೈಸೇರದಿದ್ದರೂ ಕಮಿಷನ್‌ ಏಜೆಂಟರು ಕೈತುಂಬ ಹಣ ಮಾಡಿಕೊಳ್ಳುತ್ತಿದ್ದಾರೆ.

ಗುಣಮಟ್ಟದ ಹಸಿ ಮೆಣಸಿನಕಾಯಿ ಪ್ರತಿ ಕೆ.ಜಿಗೆ ₹ 120ಗೆ ಮಾರಾಟವಾಗುತ್ತಿದೆ. ಮದುವೆ ಸಮಾರಂಭಗಳಲ್ಲಿ ಭೋಜನ ಸಿದ್ಧಪಡಿಸಲು ಬೀನ್ಸ್‌ ಹಾಗೂ ಡೊಣ ಮೆಣಸಿನಕಾಯಿ ಅಧಿಕ ಪ್ರಮಾಣದಲ್ಲಿ ಖರೀದಿಯಾಗುತ್ತಿದೆ. ಹೀಗಾಗಿ ಸಹಜವಾಗಿಯೇ ಇವುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ADVERTISEMENT

ಪ್ರತಿ ಕ್ವಿಂಟಲ್‌ಗೆ ಮೆಣಸಿನಕಾಯಿ, ಬೀನ್ಸ್‌, ಡೊಣ ಮೆಣಸಿನಕಾಯಿ ಬೆಲೆ ₹ 2 ಸಾವಿರ ಏರಿಕೆಯಾಗಿದೆ, ಎಲೆಕೋಸು, ಹೂಕೋಸು, ಬೆಳ್ಳುಳ್ಳಿ, ಗಜ್ಜರಿ, ಬೀಟ್‌ರೂಟ್‌ ಹಾಗೂ ಪಾಲಕ್‌ ಬೆಲೆ ₹ 1 ಸಾವಿರ ಹೆಚ್ಚಾಗಿದೆ .

ಸಬ್ಬಸಗಿ ಸೊಪ್ಪಿನ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರ, ಬೆಂಡೆಕಾಯಿ, ಹಿರೇಕಾಯಿ ಹಾಗೂ ಚವಳೆಕಾಯಿ ಬೆಲೆ ₹ 1 ಸಾವಿರ ಇಳಿದಿದೆ. ಈರುಳ್ಳಿ, ಆಲೂಗಡ್ಡೆ, ಟೊಮೆಟೊ, ಬದನೆಕಾಯಿ, ನುಗ್ಗೆಕಾಯಿ, ತೊಂಡೆಕಾಯಿ, ಕರಿಬೇವು, ಕೊತಂಬರಿ, ಮೆಂತೆ ಸೊಪ್ಪು ಬೆಲೆ ಸ್ಥಿರವಾಗಿದೆ.

‘ಬಿಸಿಲಿನ ಧಗೆ ಹೆಚ್ಚಿದರೂ ಈ ವಾರ ಸೊಪ್ಪಿನ ಬೆಲೆ ಮಾತ್ರ ಕಡಿಮೆಯಾಗಿದೆ. ಸುಡು ಬಿಸಿಲಿನ ಕಾರಣ ಕಡಿಮೆ ಪ್ರಮಾಣದಲ್ಲಿ ತರಕಾರಿ ಮಾರುಕಟ್ಟೆಗೆ ಬರುತ್ತಿದೆ. ಬೆಳಗಾವಿ, ಗೋಕಾಕ, ಬೈಲಹೊಂಗಲದಿಂದ ಬೀದರ್, ತೆಲಂಗಾಣದ ಸದಾಶಿವಪೇಟ್‌ಗೆ ಮೆಣಸಿನಕಾಯಿ ಸಾಗಿಸುವ ಲಾರಿ ಚಾಲಕರಿಗೆ ಬೆಳಗಾಗುವುದರೊಳಗೆ ಸರಕು ಸಾಗಿಸಿದರೆ ₹ 2ಸಾವಿರದಿಂದ ₹ 5 ಸಾವಿರ ವರೆಗೂ ಬಹುಮಾನ ಕೊಡಲಾಗುತ್ತಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಚವಳೆಕಾಯಿ, ಗಜ್ಜರಿ, ಬೀಟ್‌ರೂಟ್‌ ಬೀದರ್‌ ತರಕಾರಿ ಮಾರುಕಟ್ಟೆಗೆ ಆವಕವಾಗಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಿಂದ ಹಿರೇಕಾಯಿ, ಬದನೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕರಿಬೇವು ಬಂದಿದೆ.

...................................................................

ತರಕಾರಿ ಮಾರುಕಟ್ಟೆ ಬೆಲೆ
......................................................................
ಈರುಳ್ಳಿ 10-20, 10-20
ಮೆಣಸಿನಕಾಯಿ 80-100,100-120
ಆಲೂಗಡ್ಡೆ 20-30,20-30
ಎಲೆಕೋಸು 20-30,30-40
ಬೆಳ್ಳುಳ್ಳಿ 30-40,50-60
ಗಜ್ಜರಿ 40-50,50-60
ಬೀನ್ಸ್‌ 80-100,100-120
ಬದನೆಕಾಯಿ 20-30,20-30
ಮೆಂತೆ ಸೊಪ್ಪು 60-80,70-80
ಹೂಕೋಸು 30-40,50-60
ಸಬ್ಬಸಗಿ 60-80,40-50
ಬೀಟ್‌ರೂಟ್‌ 20-30,30-40
ತೊಂಡೆಕಾಯಿ 50-60,50-60
ಕರಿಬೇವು 30-40,30-40
ಕೊತಂಬರಿ 10-20, 10-20
ಟೊಮೆಟೊ 5-10,5-10
ಪಾಲಕ್‌ 20-30,30-40
ಬೆಂಡೆಕಾಯಿ 40-50, 30-40
ಹಿರೇಕಾಯಿ 50-60,40-50
ನುಗ್ಗೆಕಾಯಿ 20-30,20-30
ಡೊಣ ಮೆಣಸಿನಕಾಯಿ 50-60, 60-80
ಚವಳೆಕಾಯಿ 40-50, 30-40

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.