
ಬೀದರ್: ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಬೋಧಕ ವೃಂದದ ನೇಮಕಾತಿಗೆ ಸಂಬಂಧಿಸಿದ ಖರ್ಚು ವೆಚ್ಚದ ಕುರಿತು ತದ್ವಿರುದ್ಧ ಮಾಹಿತಿ ನೀಡಿದೆ.
ಒಂದು ಕಡೆ ನೀಡಿದ ಮಾಹಿತಿಯಲ್ಲಿ ನೇಮಕಾತಿ ಕೆಲಸಕ್ಕೆ ನಿಯೋಜನೆಗೊಂಡ 41 ಜನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಖರ್ಚಾದ ವಿವರಗಳನ್ನು ಲಗತ್ತಿಸಿದೆ. ಎರಡು ಹೋಟೆಲ್‌ಗಳ ವಿವರ ನಮೂದಿಸಿ ಒಟ್ಟು ಮೊತ್ತ ತಿಳಿಸಿದೆ. ಆದರೆ, ಮತ್ತೊಂದು ಪತ್ರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇರುವುದಿಲ್ಲ ಎಂದು ತದ್ವಿರುದ್ಧವಾಗಿ ಹೇಳಿರುವುದು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ.
ಪಶು ವಿವಿ ವ್ಯಾಪ್ತಿಯ ಅಥಣಿ ಪಶು ವಿವಿ ಕಾಲೇಜಿನಲ್ಲಿ ಬೋಧಕ ವೃಂದದ ನೇಮಕಾತಿಗೆ ಸಂಬಂಧಿಸಿದ ಪ್ರಕ್ರಿಯೆ 2023ರ ಜುಲೈ 22,23 ಮತ್ತು 25ರಂದು ಬೀದರ್ ಪಶು ವಿವಿ ಮುಖ್ಯ ಕ್ಯಾಂಪಸ್‌ನಲ್ಲಿ ನಡೆಸಲಾಗಿದೆ.
ಇಡೀ ನೇಮಕಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ಖರ್ಚಾಗಿರುವ ಮಾಹಿತಿ ಕೋರಿ ವಿವಿ ಮಾಹಿತಿ ಹಕ್ಕು ಅಧಿಕಾರಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಸಾಮಾಜಿಕ ಕಾರ್ಯಕರ್ತ ಕಮಲಾಕರ ಹೆಗಡೆ ಎಂಬುವರು 2023ರ ಸೆಪ್ಟೆಂಬರ್ 9ರಂದು ಅರ್ಜಿ ಸಲ್ಲಿಸಿದ್ದರು. ನೇಮಕಾತಿಯ ಕೆಲಸಕ್ಕೆ ನಿಯೋಜನೆಗೊಂಡ ವಿವಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಯ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಖರ್ಚಾದ ಮಾಹಿತಿ ನೀಡಬೇಕೆಂದು ಕೋರಿದ್ದರು.
ಬೀದರ್‌ನ ಸತ್ಕಾರ್ ದಿ ಫ್ಯಾಮಿಲಿ ರೆಸ್ಟೊರೆಂಟ್‌ನಲ್ಲಿ ಒಂದು ಊಟಕ್ಕೆ ₹350, ಚಪಾತಿ, ಜವಾರಿ ರೊಟ್ಟಿ, ತರಕಾರಿ ಪಲ್ಯ, ಸಿಹಿ, ಅನ್ನ ಎರಡು ತರಹದ ರಸಂ, ಸಾಂಬಾರ್, ಶೇಂಗಾ ಚಟ್ನಿ, ಉಪ್ಪಿನಕಾಯಿ, ಬಾಳೆಹಣ್ಣು, ಅರ್ಧ ಲೀಟರ್ ನೀರಿನ ಬಾಟಲಿ ಊಟದಲ್ಲಿತ್ತು. ಬೆಳಗಿನ ತಿಂಡಿಗೆ ಇಡ್ಲಿ ವಡಾ, ಶಿರಾ, ಉಪ್ಪಿಟ್ಟು, ದೋಸಾ, ಈರುಳ್ಳಿ ಪೋಹಾ, ಪೂರಿ, ಭಜ್ಜಿ, ಟೀ ಕಾಫಿ, ನೀರಿನ ಬಾಟಲಿ ಸೇರಿದಂತೆ ಒಬ್ಬರಿಗೆ ₹125 ದರ ತೋರಿಸಿ, ಒಟ್ಟು ₹1.74 ಲಕ್ಷ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿತ್ತು.
ಇದಲ್ಲದೇ ಪಶು ವಿವಿ ಆವರಣದಲ್ಲಿರುವ ‘ಖುಷಿ’ ಹೆಸರಿನ ಕ್ಯಾಂಟೀನ್‌ನಿಂದ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ ಒಟ್ಟು ₹62,400 ಮೊತ್ತದ ಬಿಲ್ ಪಾವತಿಸಲಾಗಿದೆ’ ಎಂದು ತಿಳಿಸಿದೆ. ಆದರೆ, 2025ರ ಆಗಸ್ಟ್ 30ರಂದು ಕಮಲಾಕರ ಹೆಗಡೆ ಅವರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಇಲ್ಲ ಎಂಬುದಾಗಿಯೂ ವಿವಿ ತಿಳಿಸಿದೆ.
‘ನಾನು ಮಾಹಿತಿ ನೀಡಬೇಕೆಂದು ಕೋರಿದಾಗ ಮೊದಲು ಸಂಬಂಧಿಸಿದವರು ಮಾಹಿತಿ ಕೊಟ್ಟಿರಲಿಲ್ಲ. ಆನಂತರ ಪ್ರಾಧಿಕಾರಿಗಳು ಹಾಗೂ ಕುಲಪತಿಗೆ 2023ರ ಅಕ್ಟೋಬರ್ 4ರಂದು ಮೇಲ್ಮನವಿ ಸಲ್ಲಿಸಿದ್ದೆ. ಆಗ ಮೇಲ್ಮನವಿ ಪ್ರಾಧಿಕಾರದ ಸೂಚನೆ ಮೇರೆಗೆ 2024ರ ಜನವರಿ 24ರಂದು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ನನ್ನ ಕೈಸೇರುವುದಕ್ಕೆ ವಿಳಂಬವಾಗಿದ್ದರಿಂದ ನಾನು ರಾಜ್ಯ ಮಾಹಿತಿ ಆಯುಕ್ತರಿಗೆ ಎರಡನೇ ಮೇಲ್ಮನವಿ ಸಲ್ಲಿಸಿದ್ದೆ. ಮಾಹಿತಿ ಆಯುಕ್ತರು ವಿಚಾರಣೆ ನಡೆಸಿ, ಮಾಹಿತಿ ಕೊಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಅವರ ಸೂಚನೆ ಆಧರಿಸಿ 2025ರ ಆಗಸ್ಟ್ 30ರಂದು ವಿವಿ ಆಸ್ತಿ ಅಧಿಕಾರಿ ಮಾಹಿತಿ ಕೊಟ್ಟಿದ್ದಾರೆ. ಆದರೆ, ನೇಮಕಾತಿ ಅವಧಿಯ ಖರ್ಚಿನ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದ್ದಾರೆ. ಈ ಹಿಂದೆ ಇದೇ ವಿವಿಯವರು ಎರಡು ಹೋಟೆಲ್‌ಗಳ ಖರ್ಚಿನ ವಿವರ ನೀಡಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದ್ದು, ಲೋಪ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕಮಲಾಕರ ಹೆಗಡೆ ಒತ್ತಾಯಿಸಿದ್ದಾರೆ.
‘ಬೀದರ್ ಜಿಲ್ಲೆಯಲ್ಲಿ ರೊಟ್ಟಿ ಊಟಕ್ಕೆ ಎಂತಹುದೇ ದೊಡ್ಡ ಹೋಟೆಲ್‌ಗೆ ಹೋದರೂ ಒಂದು ಊಟಕ್ಕೆ ಅಬ್ಬಬ್ಬಾ ಅಂದರೆ ₹120ರಿಂದ ₹140 ದರ ಇದೆ. ವಿವಿ ಕೊಟ್ಟ ಮಾಹಿತಿಯಲ್ಲಿ ₹350 ಎಂದು ಎರಡು ಪಟ್ಟು ಅಧಿಕ ತೋರಿಸಿದ್ದಾರೆ. ನಾವು ಕೊಟ್ಟ ಮಾಹಿತಿ ತಪ್ಪು ಇದೆ ಎಂದು ಮನಗಂಡು, ಇನ್ನೊಂದು ಪತ್ರದಲ್ಲಿ ಯಾವುದೇ ಮಾಹಿತಿ ಇಲ್ಲ ಎಂಬುದಾಗಿ ತಿಳಿಸಿ ಮರೆಮಾಚುವ ಪ್ರಯತ್ನ ಮಾಡಿದ್ದಾರೆ. ವಿವಿಯಲ್ಲಿ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ನಡೆಸಲಾಗುತ್ತಿದೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ಕೊಡಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.
ವಿವಿ ಕುಲಸಚಿವ ಪಿ.ಟಿ. ರಮೇಶ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.
ಪಶು ವಿವಿ ಅಧಿಕಾರಿಗಳು ತದ್ವಿರುದ್ಧ ಹೇಳಿಕೆ ಕೊಟ್ಟಿರುವುದು ನೋಡಿದರೆ ಇದರಲ್ಲಿ ಭ್ರಷ್ಟಾಚಾರ ಎಸಗಿರುವುದು ಕಂಡು ಬರುತ್ತದೆ. ಅವರು ಕೊಟ್ಟ ಮಾಹಿತಿ ಆಧರಿಸಿಯೇ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕುಕಮಲಾಕರ ಹೆಗಡೆ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.