ADVERTISEMENT

ಚಿನ್ನದ ಪದಕಗಳ ಪುಳಕ; ಸಾಧನೆಯ ಸಾರ್ಥಕತೆ

ಕರ್ನಾಟಕ ಪಶು ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ ಸಂಭ್ರಮ; 86 ಚಿನ್ನದ ಪದಕಗಳ ಪ್ರದಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಫೆಬ್ರುವರಿ 2026, 9:02 IST
Last Updated 28 ಫೆಬ್ರುವರಿ 2026, 9:02 IST
ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು
–ಪ್ರಜಾವಾಣಿ ಚಿತ್ರಗಳು: ಲೋಕೇಶ್‌ ವಿ. ಬಿರಾದಾರ
ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಸ್ನಾತಕ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರಗಳು: ಲೋಕೇಶ್‌ ವಿ. ಬಿರಾದಾರ   

ನಂದಿನಗರ (ಬೀದರ್‌): ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವವು ಶುಕ್ರವಾರ ಸಂಭ್ರಮ ಹಾಗೂ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿನ್ನದ ಪದಕಗಳಿಗೆ ವಿದ್ಯಾರ್ಥಿಗಳ ಹೆಸರು ಘೋಷಿಸುತ್ತಿದ್ದಂತೆ ಕರತಾಡನ ಜೋರಾಯಿತು. ಉತ್ಸಾಹದೊಂದಿಗೆ ವೇದಿಕೆಯ ಮೇಲೇರಿ ರಾಜ್ಯಪಾಲರಿಂದ ಪದಕ ಹಾಗೂ ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದ ವಿದ್ಯಾರ್ಥಿಗಳಲ್ಲಿ ಸಾಧನೆಯ ಸಾರ್ಥಕ ಭಾವ ಇಣುಕುತ್ತಿತ್ತು. ಅವರ ಸಂಭ್ರಮ ಇಮ್ಮಡಿಯಾಗಿತ್ತು. ಇನ್ನೊಂದೆಡೆ ತಾವು ಕಷ್ಟಪಟ್ಟು ಓದಿಸಿದ ಮಕ್ಕಳು, ನಿರೀಕ್ಷೆಯಂತೆ ಓದಿ, ಅತ್ಯುತ್ತಮ ಸಾಧನೆ ಮಾಡಿದನ್ನು ಕಣ್ಣಾರೆ ಕಂಡ ಅವರ ಪೋಷಕರ ಕಣ್ಣಾಲಿಗಳಲ್ಲಿ ತುಂಬಿ ಬಂದವು. ಜನರೊಂದಿಗೆ ತಾವು ಕೂಡ ಚಪ್ಪಾಳೆ ಹೊಡೆದು ಆ ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು.

ಪದಕ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿದ ಬಂದ ಮಕ್ಕಳಿಗೆ ಪೋಷಕರು ತಬ್ಬಿಕೊಂಡು ತಲೆಯ ಮೇಲೆ ಕೈಯಾಡಿಸಿ, ಹಣೆಯ ಮೇಲೆ ಮುತ್ತಿಟ್ಟು ತಮ್ಮ ಪ್ರೀತಿ, ಅಭಿಮಾನ ತೋರಿದರು. ಬಳಿಕ ಪೋಷಕರು, ಬಂಧು ಬಾಂಧವರು, ವಿದ್ಯೆ ಕಲಿಸಿದ ಗುರು, ಸಹಪಾಠಿಗಳೊಂದಿಗೆ ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡರು.

ADVERTISEMENT

ಒಟ್ಟು 576 ವಿದ್ಯಾರ್ಥಿಗಳಲ್ಲಿ 455 ಸ್ನಾತಕ ಪದವೀಧರರು, 107 ಸ್ನಾತಕೋತ್ತರ ಹಾಗೂ 14 ಡಾಕ್ಟರೇಟ್‌ ಪದವೀಧರರಿದ್ದಾರೆ. ಘಟಿಕೋತ್ಸವಕ್ಕೆ 94 ಪದವೀಧರರು ಹಾಜರಾಗಿದ್ದರು. ಈ ಪೈಕಿ 34 ಪ್ರತಿಭಾನ್ವಿತ ಸ್ನಾತಕ, ಸ್ನಾತಕೋತ್ತರ ಮತ್ತು ಡಾಕ್ಟರೇಟ್‌ ಪದವೀಧರರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು. ಇದರಲ್ಲಿ 21 ವಿಶ್ವವಿದ್ಯಾಲಯದ ಪದಕಗಳು, 60 ಪ್ರಾಯೋಜಿತ ಚಿನ್ನದ ಪದಕಗಳು ಸೇರಿವೆ.

ಕಾರ್ಯಕ್ರಮಕ್ಕೂ ಮುನ್ನ ರಾಜ್ಯಪಾಲರನ್ನು ವಿವಿ ಆಡಳಿತ ಕಚೇರಿಯಿಂದ ಸಭಾಂಗಣದ ವರೆಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ವಂದೇ ಮಾತರಂ, ರಾಷ್ಟ್ರಗೀತೆ ನಂತರ ವಿವಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಅವರು ಸ್ವಾಗತ ಕೋರಿ, ವಿವಿ ಬೆಳೆದು ಬಂದ ಹಾದಿ, ಅದರ ಗುರಿ, ಸಂಶೋಧನೆಗಳ ಮಾಹಿತಿ ಹಂಚಿಕೊಂಡರು. ಕುಲಸಚಿವ ಪಿ.ಟಿ.ರಮೇಶ್‌ ಹಾಗೂ ವಿವಿ ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರಿಗೆ ವಿವಿ ಕುಲಸಚಿವ ಪ್ರೊ. ಪಿ.ಟಿ. ರಮೇಶ್‌ ಹಾಗೂ ಇತರರು ಸಾಂಪ್ರದಾಯಿಕ ಸ್ವಾಗತ ಕೋರಿದರು
ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ 2024–25ನೇ ಸಾಲಿನ ಬಿಟೆಕ್‌ (ಹೈನು ತಂತ್ರಜ್ಞಾನ) ಸ್ನಾತಕ ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್‌.. ಅವರು ಆರು ಚಿನ್ನದ ಪದಕಗಳೊಂದಿಗೆ
2023-24ನೇ ಸಾಲಿನ ಎಂವಿಎಸ್‍ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಮೈಲಾಂಡ್ಲಹಳ್ಳಿಯ ವಿಜಯಕುಮಾರ್‌ ಎಂ.ಸಿ.
16 ಚಿನ್ನದ ಪದಕಗಳ ಸಾಧಕಿ ಖುಷಿ ಅವರಿಗೆ ಅವರ ತಾಯಿ ಸುಜಾತಾ ಅವರು ಮುತ್ತಿಕ್ಕಿ ಹರಸಿದರು

Cut-off box -

Cut-off box - ಉದ್ಯೋಗಕ್ಕಾಗಿ ಅಲೆದಾಡದಿರಿ ಉದ್ಯೋಗದಾತರಾಗಿ–ರಾಜ್ಯಪಾಲ ‘ಯುವಕ/ಯುವತಿಯರು ಉದ್ಯೋಗಕ್ಕಾಗಿ ಅಲೆದಾಡಬೇಕಿಲ್ಲ. ಸ್ವತಃ ಸ್ವಾವಲಂಬಿಗಳಾಗಿ ಉದ್ಯೋಗದಾತರಾಗಬೇಕು’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪದವಿ ಪ್ರಮಾಣ ಪತ್ರಗಳನ್ನು ವಿತರಿಸಿದ ನಂತರ ಮಾತನಾಡಿದ ಅವರು ನಿಮ್ಮ ಜ್ಞಾನ ಸಂಶೋಧನೆ ಗ್ರಾಮೀಣರ ಅಭಿವೃದ್ಧಿ ಸಬಲೀಕರಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು. ಕೃಷಿಕರ ಆದಾಯ ವೃದ್ಧಿ ಸ್ವದೇಶಿ ವಸ್ತುಗಳ ಬಳಕೆ ಕೃಷಿ ಉದ್ಯಮದ ವಿಸ್ತಾರಕ್ಕೆ ಒತ್ತು ಕೊಡಬೇಕು. ಆತ್ಮನಿರ್ಭರ ಭಾರತ ವಿಕಸಿತ ಭಾರತದ ಸಂಕಲ್ಪದೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು. ಜಗತ್ತಿನಲ್ಲಿ ಭಾರತ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಉತ್ತಮ ಸಾಧನೆ ಮಾಡಿದೆ. ಅದನ್ನು ಹೊಸ ತಂತ್ರಜ್ಞಾನದೊಂದಿಗೆ ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಕೃಷಿ ಹಾಗೂ ಮತ್ಸ್ಯೋದ್ಯಮ ಕ್ಷೇತ್ರದಲ್ಲಿ ಭಾರತ ಮುಂದಡಿ ಇಡುತ್ತಿದೆ. ಅದಕ್ಕೆ ಇನ್ನಷ್ಟು ವೇಗ ಕೊಡುವ ಕೆಲಸವಾಗಬೇಕಿದೆ ಎಂದು ತಿಳಿಸಿದರು. ಭಾರತ ಕೃಷಿ ಪ್ರಧಾನ ದೇಶ. ಪಶು ಸಂಗೋಪನೆ ದೇಶದ ಬೆನ್ನೆಲುಬು. ಅನೇಕ ಜನರ ಜೀವನದ ಭಾಗವಾಗಿದೆ. ಅದೇ ರೀತಿ ಪಶು ಮತ್ಸ್ಯೋದ್ಯಮ ಕೂಡ. ಇಲ್ಲಿ ಜ್ಞಾನಾರ್ಜನೆ ಪಡೆದ ವಿದ್ಯಾರ್ಥಿಗಳ ಜ್ಞಾನಾಧಾರಿತ ಕೌಶಲ ಪ್ರತಿ ಹಳ್ಳಿ ತಲುಪಬೇಕು. ಜೀವನದಲ್ಲಿ ಸಫಲತೆ ಶಿಸ್ತು ನಡತೆಯಿಂದ ಸಿಗುತ್ತದೆ. ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಎದುರಿಸಬೇಕು. ರೈತರ ಪರ ಸಂವೇದನೆ ಇಟ್ಟುಕೊಂಡು ಕೆಲಸ ಮಾಡಬೇಕು. ಜ್ಞಾನ ಕೌಶಲ ನೈತಿಕ ಮೌಲ್ಯಗಳೊಂದಿಗೆ ಕೆಲಸ ನಿರ್ವಹಿಸುವುದು ಬಹಳ ಮುಖ್ಯ. ಜೊತೆಗೆ ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆ ನೀಡಬೇಕು ಎಂದು ಸಲಹೆ ಮಾಡಿದರು.

Cut-off box - ಸಂಶೋಧನೆಯಿಂದ ರೈತರ ಬದುಕು ಬದಲಾಗಲಿ–ಸಚಿವ ವೆಂಕಟೇಶ್‌ ‘ಹೊಸ ಹೊಸ ಸಂಶೋಧನೆಗಳಿಂದ ರೈತರ ಬದುಕು ಬದಲಾಗಬೇಕು. ಆಗ ಅದರ ಮೌಲ್ಯ ಹೆಚ್ಚಾಗುತ್ತದೆ’ ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ಹೇಳಿದರು. ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ನಿತ್ಯ 1 ಕೋಟಿ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಸಂಶೋಧಕರ ಪಾತ್ರ ಬಹಳ ಮಹತ್ವದಿದೆ. ಹಾಲು ಉತ್ಪಾದನೆಯಿಂದ ಗ್ರಾಮೀಣರ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದರು. ಪಶು ಸಂಗೋಪನಾ ಕ್ಷೇತ್ರದ ಬಲವರ್ಧನೆಗೆ ಸರ್ಕಾರ ಶ್ರಮಿಸುತ್ತಿದೆ. ಅದಕ್ಕೆ ಪೂರಕವಾಗಿ ಪಶು ವಿವಿ ಕೆಲಸ ಮಾಡುತ್ತಿದೆ. ಜಾನುವಾರುಗಳ ಖರೀದಿಗೆ ಪ್ರೋತ್ಸಾಹ ಧನ ಜಾನುವಾರುಗಳು ಮೃತಪಟ್ಟರೆ ಅದಕ್ಕೆ ಪರಿಹಾರ ಕೊಡಲಾಗುತ್ತಿದೆ ಎಂದು ಹೇಳಿದರು.

Cut-off box - ಚಿನ್ನದ ಪದಕ ವಿಜೇತರ ಮಾತುಗಳು ಗುರಿ ಸಾಕಾರ ಆಗಿದೆ (ಚಿತ್ರ–ಖುಷಿ) ಪದವಿಯಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆಯಬೇಕೆಂಬ ಗುರಿ ಇಟ್ಟುಕೊಂಡೇ ಓದಿದೆ. ಅದು ಈಗ ಸಾಕಾರ ಆಗಿದೆ... ಹೀಗೆಂದವರು ಬಿವಿಎಸ್‍ಸಿ ಆ್ಯಂಡ್ ಎಎಚ್ ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆಗೈದ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ 2023-24ನೇ ಬ್ಯಾಚ್‍ನ ವಿದ್ಯಾರ್ಥಿನಿ ಉಡುಪಿಯ ಮಂದಾರ್ತಿಯ ಖುಷಿ. ಪದಕಗಳ ನಿರೀಕ್ಷೆ ಇತ್ತು. ಆದರೆ 16 ಪದಕಗಳು ಬರುತ್ತವೆ ಎಂದು ಊಹಿಸಿರಲಿಲ್ಲ. ತುಂಬಾ ಖುಷಿಯಾಗಿದೆ. ರಾಜ್ಯಪಾಲರಿಂದ ಪದಕ ಸ್ವೀಕರಿಸಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರತಿಕ್ರಿಯಿಸಿದರು. ‘ನನಗಾದ ಖುಷಿ ಹೇಳಿಕೊಳ್ಳಲು ಆಗುತ್ತಿಲ್ಲ’ (ಚಿತ್ರ–ಭೂಮಿಕಾ) ‘ನನಗಾದ ಖುಷಿ ಹೇಳಿಕೊಳ್ಳಲು ಆಗುತ್ತಿಲ್ಲ. ಅಷ್ಟೊಂದು ಖುಷಿಯಾಗಿದೆ. ಒಂದು ಪದಕ ಬರಬಹುದು ಅಂದುಕೊಂಡಿದ್ದೆ. ಆರು ಚಿನ್ನದ ಪದಕಗಳು ಬಂದಿವೆ. ಇದಕ್ಕೆಲ್ಲ ನನ್ನ ಓದು ಒಂದೆಡೆಯಾದರೆ ನನ್ನ ಶಿಕ್ಷಕರು ಹಾಗೂ ಸಪೋರ್ಟ್‌ ಮಾಡಿದ ಪೋಷಕರಿಗೆ ಸಲ್ಲುತ್ತದೆ’ ಎಂದು ಆರು ಚಿನ್ನದ ಪದಕಗಳಿಗೆ ಕೊರಳೊಡ್ಡಿದ ಬೆಂಗಳೂರಿನ ಹೆಬ್ಬಾಳದ ಹೈನು ವಿಜ್ಞಾನ ಕಾಲೇಜಿನ 2024–25ನೇ ಸಾಲಿನ ಬಿಟೆಕ್‌ (ಹೈನು ತಂತ್ರಜ್ಞಾನ) ಸ್ನಾತಕ ಪದವಿ ವಿದ್ಯಾರ್ಥಿನಿ ಭೂಮಿಕಾ ಕೆ.ಆರ್‌.. ಭೂಮಿಕಾ ಅವರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಕಳಂಬೆಳ್ಳ ಗ್ರಾಮದವರು. ಸದ್ಯ ತಿಪಟೂರಿನ ‘ಅಕ್ಷಯ ಕಲ್ಪ ಫಾರ್ಮ್ಸ್‌ ಅಂಡ್‌ ಫುಡ್ಸ್‌’ನಲ್ಲಿ ಎಕ್ಸಿಕ್ಯೂಟಿವ್‌ ಎನ್‌ಪಿಡಿ ಆಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರ ಬೆಂಬಲದಿಂದ ಸಾಧನೆ (ಚಿತ್ರ–ವಿಜಯಕುಮಾರ್ ಎಂ.ಸಿ.) ಉಪನ್ಯಾಸಕರು ಮಾರ್ಗದರ್ಶಕರು ಹಾಗೂ ಪಾಲಕರ ಸಹಕಾರ ಮತ್ತು ಬೆಂಬಲದಿಂದಾಗಿಯೇ ಸ್ನಾತಕೋತ್ತರ ಪದವಿಯಲ್ಲಿ ಅತ್ಯಧಿಕ ಚಿನ್ನದ ಪದಕಗಳ ಸಾಧನೆ ಮಾಡಲು ಸಾಧ್ಯವಾಗಿದೆ... 2023-24ನೇ ಸಾಲಿನ ಎಂವಿಎಸ್‍ಸಿ ಕುಕ್ಕುಟಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಲಾಂಡ್ಲಹಳ್ಳಿಯ ವಿಜಯಕುಮಾರ್ ಎಂ.ಸಿ. ಅವರ ಪ್ರತಿಕ್ರಿಯೆ ಇದು. ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವೆ. ಭವಿಷ್ಯದಲ್ಲಿ ಕಾಲೇಜಿನಲ್ಲಿ ಬೋಧನೆ ಮಾಡುವ ಉದ್ದೇಶ ಇದೆ ಎಂದು ತಿಳಿಸಿದರು. ಅತೀವ ಖುಷಿಯಾಗಿದೆ ಮಗಳ ಸಾಧನೆಯಿಂದ ಅತೀವ ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು ಬಿವಿಎಸ್‍ಸಿ ಆ್ಯಂಡ್ ಎಎಚ್ ಪದವಿಯಲ್ಲಿ 16 ಚಿನ್ನದ ಪದಕಗಳ ಸಾಧನೆ ಮಾಡಿದ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಖುಷಿ ತಾಯಿ ಸುಜಾತಾ. ಖುಷಿ ತುಂಬಾ ಪರಿಶ್ರಮ ಪಟ್ಟಿದ್ದಳು. ಓದಿನತ್ತಲೇ ಗಮನ ಕೇಂದ್ರೀಕರಿಸಿದ್ದಳು. ಅವಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ನಿರೀಕ್ಷೆಗೂ ಹೆಚ್ಚು ಪದಕಗಳು ಬಂದಿವೆ ಎಂದರು.

Cut-off box - ‘ಕೃಷಿ ವಲಯದಲ್ಲಿ ದೇಶಕ್ಕೆ ಕರ್ನಾಟಕ ಮಾದರಿ’ ‘ಕೃಷಿ ವಲಯದಲ್ಲಿ ಕರ್ನಾಟಕ ಬಹಳ ದೊಡ್ಡ ಯಶಸ್ಸು ಗಳಿಸಿದೆ. ಇಡೀ ದೇಶಕ್ಕೆ ಕರ್ನಾಟಕ ಮಾದರಿ’ ಎಂದು ಹೈದರಾಬಾದಿನ ‘ಇಕ್ರಿಸ್ಯಾಟ್‌’ ಪ್ರಧಾನ ನಿರ್ದೇಶಕ ಡಾ. ಹಿಮಾಂಶು ಪಾಠಕ್‌ ತಿಳಿಸಿದರು. ಘಟಿಕೋತ್ಸವ ಭಾಷಣ ಮಾಡಿದ ಅವರು ಭಾರತದ ಕೃಷಿ ವಲಯ ಬಹಳ ಸಾಧನೆ ಮಾಡಿದೆ. ಹಿಂದೆ ಈ ಪರಿಸ್ಥಿತಿ ಇರಲಿಲ್ಲ. ಈಗ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಅನ್ಯ ದೇಶಗಳಿಗೆ ರಫ್ತು ಮಾಡುತ್ತಿದೆ. 1950ರಲ್ಲಿ ಪ್ರತಿ ವರ್ಷ 70 ಮಿಲಿಟನ್‌ ಟನ್‌ ಹಾಲು ಉತ್ಪಾದಿಸಲಾಗುತ್ತಿತ್ತು. ಈಗ ಪ್ರತಿ ವರ್ಷ 217 ಟನ್‌ಗೆ ತಲುಪಿದೆ. ಅದೇ ರೀತಿ ಮತ್ಸ್ಯೋದ್ಯಮದಲ್ಲಿ 1 ಮಿಲಿಯನ್‌ನಿಂದ 210 ಮಿಲಿಯನ್‌ಗೆ ತಲುಪಿದೆ. ನಿಜಕ್ಕೂ ಇದು ದೊಡ್ಡ ಸಾಧನೆ ಎಂದು ವರ್ಣಿಸಿದರು. ಆದರೆ ಇಷ್ಟೇ ಸಾಲದು. ಜನಸಂಖ್ಯೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. 2047ರಲ್ಲಿ ದೇಶ ವಿಕಸಿತ ಭಾರತ ಅನಿಸಿಕೊಳ್ಳಬೇಕಾದರೆ ಕೃಷಿ ಪಶು ಸಂಗೋಪನೆ ಮತ್ತು ಮತ್ಸ್ಯೋದ್ಯಮದಲ್ಲಿ ಇನ್ನೂ ಸಾಕಷ್ಟು ಕೆಲಸಗಳಾಗಬೇಕಿದೆ. ಎಐ ಜತೆಗೆ ಅನೇಕ ಹೊಸ ತಂತ್ರಜ್ಞಾನಗಳ ಸೌಲಭ್ಯವಿದೆ. ಉತ್ಪಾದನೆ ಗುಣಮಟ್ಟ ಹೆಚ್ಚಿಸಲು ಸಾಕಷ್ಟು ಸಾಧ್ಯತೆಗಳಿವೆ. ಇವೆಗಳೆಲ್ಲಕ್ಕೂ ಶಿಕ್ಷಣ ಮೂಲವಾಗಿದೆ. ಶಿಕ್ಷಣದಿಂದಲೇ ಶಾಂತಿ ಸೌಹಾರ್ದ ಸಾಧ್ಯ ಎಂದು ತಿಳಿಸಿದರು.

Cut-off box - ಕನ್ನಡದಲ್ಲಿ ಭಾಷಣಕ್ಕೆ ಸೂಚನೆ ‘ಕನ್ನಡದಲ್ಲಿಯೇ ಸಂಪೂರ್ಣ ಭಾಷಣ ಮಾಡಬೇಕು. ಮುಂದಿನ ಘಟಿಕೋತ್ಸವ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು. ನಾನು ಕನ್ನಡದಲ್ಲಿ ಭಾಷಣ ಮಾಡಿದ್ದೇನೆ. ಕುಲಪತಿ ಇಂಗ್ಲಿಷ್‌ನಲ್ಲಿ ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದು ಬದಲಾಗಬೇಕು. ಕನ್ನಡ ಬೆಳೆಸಬೇಕು’ ಎಂದು ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್‌ ಅವರು ತಮ್ಮ ಭಾಷಣದಲ್ಲಿ ಕುಲಪತಿ ಪ್ರೊ. ಕೆ.ಸಿ. ವೀರಣ್ಣ ಅವರಿಗೆ ಸೂಚನೆ ನೀಡಿದರು.

Cut-off box - ಕನ್ನಡದಲ್ಲಿ ಮಾತು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ‘ಎಲ್ಲರಿಗೂ ನಮಸ್ಕಾರ ನಾನು ನಿಮ್ಮೆಲ್ಲರಿಗೂ ಹಾರ್ದಿಕವಾಗಿ ಸ್ವಾಗತಿಸುತ್ತೇನೆ’ ಎಂದು ಕನ್ನಡದಲ್ಲಿ ಹೇಳಿದಾಗ ಸಭಾಂಗಣದಲ್ಲಿ ಕರತಾಡನ ಮುಗಿಲು ಮುಟ್ಟಿತ್ತು. ಬಳಿಕ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.