ADVERTISEMENT

ವಿಜಯ ದಶಮಿ ಸರಳ ಆಚರಣೆ

ಜಿಲ್ಲೆಯಾದ್ಯಂತ ವಿವಿಧ ದೇವಿ ಮಂದಿರಗಳಲ್ಲಿ ಸಾಂಕೇತಿಕ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 14:39 IST
Last Updated 15 ಅಕ್ಟೋಬರ್ 2021, 14:39 IST
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಗೆಳೆಯರಿಗೆ ಬನ್ನಿ ಕೊಡಲು ಹೊರಟಿದ್ದ ಯುವಕರು
ಬೀದರ್‌ ತಾಲ್ಲೂಕಿನ ಮರಕಲ್‌ ಗ್ರಾಮದಲ್ಲಿ ಗೆಳೆಯರಿಗೆ ಬನ್ನಿ ಕೊಡಲು ಹೊರಟಿದ್ದ ಯುವಕರು   

ಬೀದರ್: ಜಿಲ್ಲೆಯಾದ್ಯಂತ ವಿಜಯ ದಶಮಿ ಪ್ರಯುಕ್ತ ಸೀಮೋಲ್ಲಂಘನೆ ಕಾರ್ಯಕ್ರಮಗಳು ಶುಕ್ರವಾರ ಸರಳವಾಗಿ ನಡೆದವು. ವಿವಿಧ ದೇವಿ ಮಂದಿರಗಳಲ್ಲಿ ಸಾಂಕೇತಿಕ ಪಲ್ಲಕ್ಕಿ ಉತ್ಸವ ಹಾಗೂ ಹಾಗೂ ಸಂಜೆ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಯಿತು.

ದೇವಿ ಮಂದಿರಗಳಲ್ಲಿ ದುರ್ಗೆಯ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಒಂಬತ್ತು ದಿನ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ದೇವಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ಮಹಿಳೆಯರು ಆರತಿ ಹಿಡಿದು ದೇವಿ ಮಂದಿರಕ್ಕೆ ನಡಿಗೆಯಲ್ಲಿ ಬಂದು ದೇವರಿಗೆ ಬನ್ನಿ ಮುಡಿಸಿದರು.

ಕೇಂದ್ರ ಬಸ್‌ ನಿಲ್ದಾಣ ಸಮೀಪದ ದೇವಿ ಮಂದಿರ, ಸರ್ವಿಸ್‌ ಸ್ಟಾಂಡ್‌ ಭವಾನಿ ದೇವಿ ಮಂದಿರ, ಮಂಗಲಪೇಟೆ, ಬ್ರಹ್ಮನವಾಡಿ, ದರ್ಜಿಗಲ್ಲಿ ಹಾಗೂ ಬೆನಕನಹಳ್ಳಿ ದೇವಿ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ADVERTISEMENT

ಭಕ್ತರು ಮನೆಗಳಲ್ಲಿ ಪ್ರತಿಷ್ಠಾಪಿಸಿದ ಘಟ್ಟಗಳಲ್ಲಿ ಮೊಳಕೆಯೊಡೆದಿದ್ದ ಸಸಿ ಹಾಗೂ ಬನ್ನಿ ಎಲೆಗಳನ್ನು ದೇವರ ಮುಡಿಗೇರಿಸಿ ನೈವೇದ್ಯ ಸಮರ್ಪಿಸಿದರು. ದೇವರ ಕೃಪೆಗೆ ಪಾತ್ರರಾದರು. ಸಂಜೆ ಬಂಧು ಬಳಗದವರಿಗೆ ಬನ್ನಿ ಎಲೆಗಳನ್ನು ಕೊಟ್ಟು ಶುಭ ಹಾರೈಸಿದರು.

ಸೀಮೋಲ್ಲಂಘನ ಕಾರ್ಯಕ್ರಮ: ಸಂಗಮೇಶ್ವರ ಹಾಗೂ ಅಲ್ಲಮಪ್ರಭು ನಗರದಲ್ಲಿ ಶುಕ್ರವಾರ ದಸರಾ ನಿಮಿತ್ತ ಸೀಮೋಲ್ಲಂಘನ ಕಾರ್ಯಕ್ರಮ ನಡೆಯಿತು. ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ ಪೂಜೆ ಸಲ್ಲಿಸಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಮುಖರಾದ ಕರಬಸಯ್ಯ, ಬಿ.ವೈಜಿನಾಥ, ಮನೋಹರರಾವ್, ಶಿವಪುತ್ರ, ಶಾಮಣ್ಣ ಇದ್ದರು.

ರಾವಣ ದಹನ: ಶ್ರೀ ರಾಮಲೀಲಾ ಉತ್ಸವ ಸಮಿತಿ ವತಿಯಿಂದ ವಿಜಯದಶಮಿ ಪ್ರಯುಕ್ತ ನಗರದ ಸಾಯಿ ಆದರ್ಶ ಶಾಲೆಯ ಆವರಣದಲ್ಲಿ ಚಿಕ್ಕದಾದ ರಾವಣನ ಪ್ರತಿಕೃತಿ ನಿರ್ಮಿಸಿ ದಹನ ಮಾಡಲಾಯಿತು. ಈ ವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ.

ಶ್ರೀ ರಾಮಲೀಲಾ ಉತ್ಸವ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಈಶ್ವರಸಿಂಗ್ ಠಾಕೂರ್, ಅಧ್ಯಕ್ಷ ಚಂದ್ರಶೇಖರ ಗಾದಾ, ರಾಜಕುಮಾರ ಅಗರವಾಲ್, ನಿಲೇಶ್ ರಕ್ಷಾಳ್, ಮಹೇಶ್ವರ ಸ್ವಾಮಿ, ಅನಿಲ ರಾಜಗೀರಾ, ಸುನೀಲ್ ಕಟಗಿ, ಶಂಕರ ಕೊಟ್ಟರಕಿ, ವಿನೋದ ಪಾಟೀಲ, ರಾಜುಕುಮಾರ ಜಮಾದಾರ ಸಾಂಕೇತಿಕವಾಗಿ ಕಾರ್ಯಕ್ರಮ
ನಡೆಸಿಕೊಟ್ಟರು.

ನರಸಿಂಹ ಝರಣಾ ದೇವಸ್ಥಾನದಲ್ಲಿ ವಿಶೇಷ ಪೂಜೆ: ವಿಜಯ ದಶಮಿ ಪ್ರಯುಕ್ತ ದುಷ್ಟ ಶಕ್ತಿಗಳ ಸಂಹಾರ ಹಾಗೂ ಕೋವಿಡ್‌ ನಿರ್ಮೂಲನೆಯಾಗಿ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿ ಬೀದರ್‌ ಹೊರ ವಲಯದಲ್ಲಿರುವ ನರಸಿಂಹ ಝರಣಾ ಗುಹಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಅನಂತರಾವ್‌ ಕುಲಕರ್ಣಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.