ADVERTISEMENT

ಹುಮನಾಬಾದ್‌ನಲ್ಲಿ ನೀರಿಗಾಗಿ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 5:32 IST
Last Updated 1 ಜೂನ್ 2025, 5:32 IST
ರಾಜಶೇಖರ ಪಾಟೀಲ
ರಾಜಶೇಖರ ಪಾಟೀಲ   

ಹುಮನಾಬಾದ್: ‘ದಿನ ಬೆಳಗಾದರೆ ನಾವು ಕೂಲಿ ಕೆಲಸಕ್ಕೆ ಹೋಗಬೇಕು. ಇಲ್ಲದಿದ್ದರೆ ಮನೆಯ ನಿರ್ವಹಣೆ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಮನೆಮಂದಿ ಎಲ್ಲರೂ ಈಗ ನೀರಿಗಾಗಿ ಕಾಯಬೇಕಾದಪರಿಸ್ಥಿತಿ ಬಂದಿದೆ... ಇದು ಹುಮನಾಬಾದ್ ಪಟ್ಟಣದ ಶಿವಪುರ, ಜರಪೇಟ್, ಇಂದ್ರಾನಗರ ಹಾಗೂ ಧನಗರ ಗಡ್ಡ ಬಡಾವಣೆಯ ಜನರ ಗೋಳು.

ಕಾರಂಜಾ ಜಲಾಶಯದಿಂದ ಮೂರ್ನಾಲ್ಕು ದಿನಕ್ಕೊಮ್ಮೆ ಬರುವ ನೀರು ಸಮಯಕ್ಕೆ ಬರುವುದಿಲ್ಲ. ನಮ್ಮ ಕೆಲಸಗಳನ್ನು ಬಿಟ್ಟು ನೀರಿಗಾಗಿ ಕಾಯಬೇಕಾಗಿದೆ ಎಂದು ಇಂದ್ರಾನಗರ ಬಡಾವಣೆ ಶಾಂತಮ್ಮ, ಜಾನವೀರ್ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳಿದ್ದು, ಬಹುತೇಕ ವಾರ್ಡಗಳಲ್ಲಿ ನೀರಿಗಾಗಿ ನಿತ್ಯ ಪರದಾಡಬೇಕಾಗಿದೆ. ಆದರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ADVERTISEMENT

ಪಟ್ಟಣ ಸೇರಿದಂತೆ ಚಿಟಗುಪ್ಪ ಪಟ್ಟಣ ಹಾಗೂ ತಾಲ್ಲೂಕಿನ ಹುಡಗಿ, ನಂದಗಾಂವ, ಇಂದ್ರಾನಗರ, ಜನತಾ ನಗರ, ಮಾಣಿಕ್ ನಗರ, ಮದರಗಾಂವ ಇತರೆ ಗ್ರಾಮಗಳು ಸೇರಿದಂತೆ ಒಟ್ಟು 20ಕ್ಕೂ ಅಧಿಕ ಗ್ರಾಮಗಳಿಗೆ ಕಾರಂಜಾ ಜಲಾಶಯದ ನೀರು ಆಧಾರವಾಗಿವೆ. ಹೀಗಾಗಿ ಕಾರಂಜಾ ಜಲಾಶಯದ ಪೈಪ್‌ಲೈನ್‌ಗಳಲ್ಲಿ ಸಮಸ್ಯೆ ಕಂಡು ಬಂದರೆ ನೀರು ಸರಬರಾಜಿನಲ್ಲಿ ಪಟ್ಟಣ‌ ಸೇರಿದಂತೆ ಈ ಗ್ರಾಮಗಳ ಜನರಿಗೆ ನೀರಿಗಾಗಿ ಹಾಹಾಕಾರ ತಪ್ಪಿದ್ದಲ್ಲ. ಪಟ್ಟಣದಲ್ಲಿನ ವಾರ್ಡ್ ಗಳಿಗೆ ನಿಗದಿಯಂತೆ ಸದ್ಯ ಮೂರ್ನಾಲ್ಕು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಪ್ರತಿಭಟನೆ : ಇಲ್ಲಿಯ ಶಿವಪುರ, ಜರಪೇಟ್, ಇಂದ್ರಾನಗರ, ಧನಗರ ಗಡ್ಡದ ಜನರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪುರಸಭೆ ಎದುರುಗಡೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

ನಂತರ ಪ್ರಮುಖರು ಮಾತನಾಡಿ, ‘ಶಿವಪುರ ಬಡಾವಣೆಯಲ್ಲಿ ಸುಮಾರು 15 ದಿನಗಳಿಂದ ಹನಿ ನೀರು ಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು. ಪ್ರತಿಭಟನೆ ಸುದ್ದಿ ತಿಳಿದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಭೇಟಿ ನೀಡಿ, ‘ಈಗಾಗಲೇ ಅಮೃತ ಯೋಜನೆ ಕಾಮಗಾರಿ ಆರಂಭವಾಗಿದೆ. ಈ ಯೋಜನೆಯಿಂದ 30 ವರ್ಷಗಳಷ್ಟು ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಹೀಗಾಗಿ ಸ್ವಲ್ಪ ದಿನ ಕಾಯಬೇಕು. ಸದ್ಯ ನೀರಿನ ಸಮಸ್ಯೆ ಇರುವ ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ಪೂರೈಸಲಾಗುವುದು’ ಎಂದು ಭರವಸೆ ನೀಡಿದರು.

ಪುರಸಭೆಯವರು 10–12 ದಿನಗಳಿಗೆ ಒಂದು ಬಾರಿ ನೀರು ಸರಬರಾಜು ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿಯ ಸ್ಥಳೀಯರು ಹಣ ಕೊಟ್ಟು ಖಾಸಗಿಯವರಿಂದ ನೀರು ಖರೀದಿಸುತ್ತಿದ್ದಾರೆ. ಸಂಬಂಧಪಟ್ಟವರು ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಭಾರತೀಯ ದಲಿತ ಪ್ಯಾಂಥರ್ ಅಧ್ಯಕ್ಷ ಗಣಪತಿ ಅಷ್ಟೂರೆ ಹೇಳಿದರು.

ಹುಮನಾಬಾದ್ ಪಟ್ಟಣದ ಪುರಸಭೆ ಎದುರುಗಡೆ ಇಂದಿರಾನಗರ ಬಡಾವಣೆಯ ಜನರು ಬಿಂದಿಗೆ ಹಿಡಿದು ಪ್ರತಿಭಟನೆ ನಡೆಸಿದರು
ಡಾ.ಸಿದ್ದಲಿಂಗಪ್ಪ ಪಾಟೀಲ
‘ಅಮೃತ’ ಯೋಜನೆಯಿಂದ ಹುಮನಾಬಾದ್ ಚಿಟಗುಪ್ಪ ಹಳ್ಳಿಖೇಡ್(ಬಿ) ಪಟ್ಟಣದ ಜನರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಸದ್ಯ ನೀರಿನ ಸಮಸ್ಯೆಯಿದ್ದರೆ ಟ್ಯಾಂಕರ್ ನೀರು ಸರಬರಾಜಿಗೆ ಸೂಚನೆ ನೀಡಲಾಗಿದೆ
ಡಾ.ಸಿದ್ದಲಿಂಗಪ್ಪ ಪಾಟೀಲ ಶಾಸಕ
ಹುಮನಾಬಾದ್ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು
ರಾಜಶೇಖರ ಪಾಟೀಲ ಮಾಜಿ ಸಚಿವ
ಕಾರಂಜಾ ಜಲಾಶಯ ಪೈಪ್‌ಲೈನ್‌ನಲ್ಲಿ ಸಮಸ್ಯೆ ಉಂಟಾಗಿದ್ದ ಕಾರಣ ನೀರಿನ ಸಮಸ್ಯೆ ಆಗಿದೆ. ಎರಡು ದಿನದಲ್ಲಿ ಪೈಪ್‌ಲೈನ್ ದುರಸ್ತಿಯಾಗಲಿದೆ. ಸದ್ಯ ಜನರಿಗೆ ನೀರಿನ ಸಮಸ್ಯೆ ಆಗದಂತೆ ಪರ್ಯಾಯ ವ್ಯವಸ್ಥೆಗೆ ತಕ್ಷಣ ಕ್ರಮಕೈಗೊಳ್ಳಲಾಗುವುದು
ಮೀನಾಕುಮಾರಿ ಬೋರಾಳಕರ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.