ADVERTISEMENT

ಬೀದರ್‌: ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು

ಜಿಲ್ಲೆಯ ಗ್ರಾಮೀಣ ರಸ್ತೆಗಳು ಕೆಸರುಮಯ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 14:08 IST
Last Updated 30 ಆಗಸ್ಟ್ 2021, 14:08 IST
ಬೀದರ್‌ನ ಗುಂಪಾ ಸಮೀಪ ರಿಂಗ್‌ ರಸ್ತೆ ಮೇಲೆ ನಿಂತಿದ್ದ ನೀರು
ಬೀದರ್‌ನ ಗುಂಪಾ ಸಮೀಪ ರಿಂಗ್‌ ರಸ್ತೆ ಮೇಲೆ ನಿಂತಿದ್ದ ನೀರು   

ಬೀದರ್‌: ಜಿಲ್ಲೆಯ ವಿವಿಧೆಡೆ ಸೋಮವಾರ ಧಾರಾಕಾರ ಮಳೆಯಾಗಿದ್ದು, ಹಳ್ಳದ ದಂಡೆಗಳಲ್ಲಿರುವ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಕಮಲನಗರ ತಾಲ್ಲೂಕಿನ ಮತಖೇಡದಲ್ಲಿ ಬಬ್ರುವಾಹನ ರಾಮಕಿಶನ್‌ ಅವರಿಗೆ ಸೇರಿದ ಎಮ್ಮೆ ಸಿಡಿಲು ಬಡಿದು ಮೃತಪಟ್ಟಿದೆ.

ಭಾರಿ ಮಳೆಗೆ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮ ಸಮೀಪದ ಹಳ್ಳ ತುಂಬಿ ಹರಿಯುತ್ತಿದೆ. ಹನುಮಾನ ಮಂದಿರದ ವರೆಗೂ ನೀರು ಬಂದಿದ್ದು, ಮಂದಿರ ಭಾಗಶಃ ಕುಸಿದಿದೆ. ಗ್ರಾಮದ ಪ್ರಮುಖ ರಸ್ತೆ ನೀರಿನಲ್ಲಿ ಮುಳುಗಿದೆ. ಖಟಕಚಿಂಚೋಳಿ ಹೋಬಳಿಯ ಏಣಕೂರ್ ಗ್ರಾಮದಲ್ಲಿ ನೀರು ಮನೆಗಳಿಗೆ ನುಗ್ಗಿದೆ. ಭಾಲ್ಕಿ ತಹಶೀಲ್ದಾರ್ ಕೀರ್ತಿ ಚಾಲಕ್‌ ಅವರು ಗ್ರಾಮಕ್ಕೆ ಭೇಟಿ ನೀಡಿ ಜಲಾವೃತಗೊಂಡಿರುವ ಮನೆಗಳನ್ನು ವೀಕ್ಷಿಸಿದರು.

ಹುಲಸೂರು ತಾಲ್ಲೂಕಿನ ಗೋರಟಾದಲ್ಲಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಹಳ್ಳದ ಪಕ್ಕ ಇರುವ ಅಂಬೇಡ್ಕರ್ ಕಾಲೊನಿ ಜಲಾವೃತಗೊಂಡಿದೆ. ಮನೆಗಳಿಗೆ ನೀರು ನುಗ್ಗುತ್ತಿದ್ದಂತೆಯೇ ಜನ ಮನೆಗಳಲ್ಲಿನ ಅಗತ್ಯ ವಸ್ತುಗಳನ್ನು ಎತ್ತಿಕೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಿದರು.

ADVERTISEMENT

ಜಲಾವೃತವಾದ ಬೆಳೆಗಳು

‌ಜನವಾಡ: 24 ಗಂಟೆಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ ಬೀದರ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳೆಗಳು ಜಲಾವೃತಗೊಂಡಿವೆ.

ಜನವಾಡ, ಅಲಿಯಂಬರ್, ಯರನಳ್ಳಿ, ಚಿಲ್ಲರ್ಗಿ, ಚಿಮಕೋಡ್, ಮಾಳೆಗಾಂವ್, ಜಾಂಪಡ, ಬಸಂತಪುರ ಮೊದಲಾದ ಗ್ರಾಮಗಳಲ್ಲಿ ಉದ್ದು, ಹೆಸರು, ಸೋಯಾಬೀನ್, ತೊಗರಿ ಹಾಗೂ ಹತ್ತಿ ಬೆಳೆಗಳಲ್ಲಿ ನೀರು ನಿಂತುಕೊಂಡಿದೆ.

ಉದ್ದು, ಹೆಸರು ಬೆಳೆಗಳು ಈಗಾಗಲೇ ಕಟಾವಿಗೆ ಬಂದಿವೆ. ಮಳೆಯಿಂದ ಹೊಲದಲ್ಲಿ ನೀರು ಸಂಗ್ರಹವಾಗಿರುವ ಕಾರಣ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಚಿಲ್ಲರ್ಗಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಿಲ್ಲರ್ಗಿ ತಿಳಿಸಿದರು.

ಅನೇಕ ರೈತರು ಉದ್ದು, ಹೆಸರು ರಾಶಿಗೆ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಮಳೆ ಅದಕ್ಕೆ ಅಡ್ಡಿಯಾಗಿದೆ. ಕೆಲ ರೈತರು ಕಟಾವು ಮಾಡಿ ಸಂಗ್ರಹಿಸಿ ಇಟ್ಟಿರುವ ಬೆಳೆಗಳು ಮೊಳಕೆ ಒಡೆಯುತ್ತಿವೆ. ಹೀಗಾಗಿ ರೈತರು ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.

ನಗರದ ರಸ್ತೆಗಳು ಕೆಸರುಮಯ‌

ಬೀದರ್‌ ನಗರದಲ್ಲೂ ಬೆಳಿಗ್ಗೆ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನದ ನಂತರ ಸ್ವಲ್ಪ ಬಿಡುವು ನೀಡಿದರೂ ಅಲ್ಲಲ್ಲಿ ಜಿಟಿ ಜಿಟಿ ಮಳೆ ಮುಂದುವರಿದಿತ್ತು.

ಕೆಇಬಿ ಮುಂಭಾಗದ ರಸ್ತೆ, ರೋಟರಿ ವೃತ್ತದಿಂದ ಜನರಲ್‌ ಕಾರ್ಯಪ್ಪ ವೃತ್ತದ ವರೆಗಿನ ರಸ್ತೆ ಸಂಪೂರ್ಣ ಕೆಸರುಗುಂಡಿಯಾಗಿತ್ತು. ರೋಟರಿ ವೃತ್ತ, ಹಾರೂರಗೇರಿ ಕ್ರಾಸ್‌, ಗುಂಪಾರಸ್ತೆ ಹಾಗೂ ಮೈಲೂರ್‌ನಲ್ಲಿ ರಸ್ತೆ ಮೇಲೆ ನೀರು ನಿಂತುಕೊಂಡಿತ್ತು.

ಬೀದರ್ ತಾಲ್ಲೂಕಿನ ಮಂದಕನಳ್ಳಿ, ಗಾದಗಿ ರಸ್ತೆ ಕೆಸರು ತುಂಬಿಕೊಂಡು ಸಂಚಾರಕ್ಕೆ ಸಮಸ್ಯೆ ಆಯಿತು.

ಬೇಮಳಖೇಡದಲ್ಲಿ ಅತಿ ಹೆಚ್ಚು ಮಳೆ:

ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದಲ್ಲಿ ಅತಿ ಹೆಚ್ಚು 81 ಮಿ.ಮೀ ಮಳೆ ದಾಖಲಾಗಿದೆ. ಭಾಲ್ಕಿ ಹಾಗೂ ಹುಮಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ 67 ಮಿ.ಮೀ. ಬೀದರ್ ತಾಲ್ಲೂಕಿನ ಮನ್ನಳ್ಳಿ, ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯಲ್ಲಿ 66.5 ಮಿ.ಮೀ, ಗೋರಚಿಂಚೋಳಿಯಲ್ಲಿ 64.5 ಮಿ.ಮೀ ಮಳೆಯಾಗಿದೆ.

ಬಸವಕಲ್ಯಾಣ ಸಮೀಪದ ಚುಳಕಿನಾಲಾ ಜಲಾಶಯ ತುಂಬಿದ್ದು, ಎರಡು ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಗೆ ಬಿಡಲಾಗಿದೆ. ತಹಶೀಲ್ದಾರ್ ಶಿವಾನಂದ ಮೇತ್ರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಭಾಲ್ಕಿ ತಾಲ್ಲೂಕಿನ ಕಾರಂಜಾ ಜಲಾಶಯ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಮುಲ್ಲಾಮಾರಿ ಮೇಲ್ದಂಡೆ ಜಲಾಶಯ ಭರ್ತಿಯಾಗಿದೆ.

ಕಾರಂಜಾ ಜಲಾಶಯದಿಂದ ಯಾವುದೇ ಸಂದರ್ಭದಲ್ಲೂ ನೀರು ಹೊರಗೆ ಬಿಡಲಾಗುವುದು. ಕಾರಂಜಾ ಜಲಾಶಯ ಮತ್ತು ಮಾಂಜ್ರಾ ನದಿ ತೀರದಲ್ಲಿ ಇರುವ ಗ್ರಾಮಸ್ಥರು ಎಚ್ಚರ ವಹಿಸಬೇಕು. ಜನ ನದಿ ದಂಡೆಗಳಿಗೆ ಹೋಗಬಾರದು. ಜಾನುವಾರುಗಳನ್ನು ಒಯ್ಯಬಾರದು ಎಂದು ಕಾರಂಜಾ ಯೋಜನೆಯ ಸಹಾಯಕ ಎಂಜಿನಿಯರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.