ADVERTISEMENT

ಜನವಾಡ | ಕಲ್ಲಂಗಡಿಗೆ ಸಿಗದ ಬೆಲೆ: ರೈತರಿಗೆ ಸಂಕಷ್ಟ

ನಾಗೇಶ ಪ್ರಭಾ
Published 5 ಏಪ್ರಿಲ್ 2025, 5:26 IST
Last Updated 5 ಏಪ್ರಿಲ್ 2025, 5:26 IST
   

ಜನವಾಡ: ಈ ವರ್ಷ ಕಲ್ಲಂಗಡಿಗೆ ಯೋಗ್ಯ ಬೆಲೆ ಸಿಗದಿರುವುದರಿಂದ ಬೀದರ್ ತಾಲ್ಲೂಕಿನ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಲ್ಲಂಗಡಿ ಬೆಳೆದ ಬಹುತೇಕರಿಗೆ ಮೊದಲ ಕಟಾವಿನಲ್ಲಿ ಕೆಜಿಗೆ ಸರಾಸರಿ ₹8 ರಿಂದ ₹9 ಹಾಗೂ ಎರಡನೇ ಕಟಾವಿನಲ್ಲಿ ₹3 ರಿಂದ ₹4.5 ಬೆಲೆ ಮಾತ್ರ ದೊರೆತಿದೆ.

ಮಹಾ ಶಿವರಾತ್ರಿ ಹಾಗೂ ರಂಜಾನ್ ವೇಳೆ ಅಧಿಕ ಬೆಲೆ ಸಿಗಬಹುದು ಎಂದು ಅನೇಕ ರೈತರು ನಿರೀಕ್ಷಿಸಿದ್ದರು. ಅದೂ ಕೈಗೂಡಿಲ್ಲ. ಖರೀದಿದಾರರು ರೈತರಿಂದ ಖರೀದಿಸುವ ಬೆಲೆ ಕೆ.ಜಿ.ಗೆ ₹10 ಸಹ ದಾಟದ ಕಾರಣ ನಿರಾಶೆ ಅನುಭವಿಸಿದ್ದಾರೆ. ಗೊಬ್ಬರ, ಕೀಶನಾಟಕ ಬೆಲೆ, ಆಳುಗಳ ಕೂಲಿ ಹೆಚ್ಚಾದರೂ ಬೆಲೆ ಏರಿಕೆಯಾಗಿಲ್ಲ ಎಂದು ಬೆಳೆಗಾರರು ಅಳಲು ತೋಡಿಕೊಳ್ಳುತ್ತಾರೆ.

‘ಆರು ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಮೊದಲ ಕಟಾವಿನಲ್ಲಿ ಕೆ.ಜಿ.ಗೆ ₹9 ಮತ್ತು ಎರಡನೇ ಕಟಾವಿನಲ್ಲಿ ₹4.5 ಬೆಲೆ ಲಭಿಸಿದೆ’ ಎಂದರು ಮಂದಕನಳ್ಳಿಯ ರೈತ ಚನ್ನಪ್ಪ ಗೌರಶೆಟ್ಟಿ.

ADVERTISEMENT

’ಕಲ್ಲಂಗಡಿ ಕಟಾವಿಗೆ ಬಂದ ನಂತರ ಒಂದು ವಾರವಷ್ಟೇ ಉಳಿಯುತ್ತದೆ. ಬೆಳೆಗಾರರು ಹಾಗೂ ಖರೀದಿದಾರರ ನಡುವಿನ ದಲ್ಲಾಳಿಗಳು ಬಹುತೇಕ ಒಂದೇ ಬೆಲೆ ನಿಗದಿ ಮಾಡುತ್ತಾರೆ. ಹೀಗಾಗಿ ರೈತರಿಗೆ ಬೇರೆ ಆಯ್ಕೆ ಇಲ್ಲ. ಬಂದಷ್ಟು ಬೆಲೆಗೆ ಫಸಲು ಕೊಡಬೇಕಾಗಿದೆ’ ಎಂದು ಹೇಳುತ್ತಾರೆ ಕಮಠಾಣದ ಸೂರ್ಯಕಾಂತ ಕ್ಯಾಸಾ.

ಪ್ರಸಕ್ತ ವರ್ಷ ಕಲ್ಲಂಗಡಿಗೆ ಉತ್ತಮ ಬೆಲೆ ದೊರಕಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಹಾಗೆ ಆಗಿಲ್ಲ.
ಚನ್ನಪ್ಪ ಗೌರಶೆಟ್ಟಿ, ಮಂದಕನಳ್ಳಿಯ ರೈತ

‘ಮಾರುಕಟ್ಟೆಯಲ್ಲಿ ಕಲ್ಲಂಗಡಿ ಬೆಲೆ ₹15 ರಿಂದ ₹20 ಇದೆ. ಆದರೆ, ಮೊದಲ ಕಟಾವಿನಲ್ಲಿ ₹8.60 ಮತ್ತು ಎರಡನೇ ಕಟಾವಿನಲ್ಲಿ ₹4.30 ಬೆಲೆ ಮಾತ್ರ ದೊರೆತಿದೆ’ ಎಂದರು.

’ಹವಾಮಾನ ವೈಪರಿತ್ಯದಿಂದ ಈ ಸಲ ಇಳುವರಿಯಲ್ಲಿ ಶೇ 25 ರಷ್ಟು ಕುಸಿತವಾಗಿದೆ. ಕೆ.ಜಿ.ಗೆ ಕನಿಷ್ಠ ₹10ರ ಮೇಲೆ ಬೆಲೆ ಸಿಗಬಹುದೆಂಬ ಆಸೆ ಇತ್ತು. ಮೊದಲ ಕಟಾವಿನಲ್ಲಿ ಕೆ.ಜಿ.ಗೆ ₹8.5 ಹಾಗೂ ಎರಡನೇ ಕಟಾವಿನಲ್ಲಿ ₹3 ಬೆಲೆ ಸಿಕ್ಕಿದೆ’ ಎಂದು ಹೇಳುತ್ತಾರೆ ಮಂದಕನಳ್ಳಿಯ ರೈತ ಅನಿಲ್ ಕೋಳಿ.

ಸರ್ಕಾರ, ತೊಗರಿ ಹಾಗೂ ಇತರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿ ಬೆಳೆಗಾರರ ಹಿತ ರಕ್ಷಿಸುತ್ತಿದೆ. ಆದರೆ, ಕಲ್ಲಂಗಡಿ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೆಳೆಗಾರರು ನೋವು ತೋಡಿಕೊಂಡಿದ್ದಾರೆ. ಸರ್ಕಾರ ಕಲ್ಲಂಗಡಿ ಬೆಳೆಗಾರರ ನೆರವಿಗೂ ಧಾವಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.