ADVERTISEMENT

ವಾರಾಂತ್ಯ ಕರ್ಫ್ಯೂ: ಮಾರುಕಟ್ಟೆ ಸ್ತಬ್ಧ

ಮನೆಗಳಿಂದ ಹೊರಗೆ ಬರದ ಜನ, ಬಿಕೋ ಎನ್ನುತ್ತಿದ್ದ ರಸ್ತೆಗಳು

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 14:13 IST
Last Updated 15 ಜನವರಿ 2022, 14:13 IST
ಬೀದರ್‌ನ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ ಜನರಿಲ್ಲದೆ ಬಿಕೋ ಎನ್ನುತ್ತಿತ್ತು
ಬೀದರ್‌ನ ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ ಜನರಿಲ್ಲದೆ ಬಿಕೋ ಎನ್ನುತ್ತಿತ್ತು   

ಬೀದರ್: ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲೆಯಲ್ಲಿ ಅಘೋಷಿತ ಬಂದ್‌ ವಾತಾವರಣ ಕಂಡು ಬಂದಿತು. ನಗರದ ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿತ್ತು. ನಗರದ ವೃತ್ತಗಳು ಹಾಗೂ ಪ್ರಮುಖ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು.

ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಬೆರಳೆಣಿಕೆಯಷ್ಟು ಇತ್ತು. ಪ್ರಯಾಣಿಕರ ಕೊರತೆ ಕಾರಣ ಗ್ರಾಮೀಣ ಪ್ರದೇಶದ ಕೆಲ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಕಲಬುರ್ಗಿ–ಬೀದರ್‌ ಮಧ್ಯೆಯೂ ಕಡಿಮೆ ಸಂಖ್ಯೆಯಲ್ಲಿ ಬಸ್‌ಗಳು ಸಂಚರಿಸಿದವು.

ಆಟೊರಿಕ್ಷಾ ಸಂಚಾರ ಸಹ ವಿರಳವಾಗಿತ್ತು. ಕೇಂದ್ರ ಬಸ್‌ ನಿಲ್ದಾಣ ಬಳಿ ಮಾತ್ರ ಆಟೊಗಳು ನಿಲುಗಡೆಯಾಗಿದ್ದವು. ಉಳಿದ ಕಡೆ ಆಟೊಗಳು ಕಾಣಸಿಗಲಿಲ್ಲ.

ADVERTISEMENT

ನಗರದ ಬಸವೇಶ್ವರ ವೃತ್ತ, ಡಾ.ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್‌ ವೃತ್ತ, ಮಡಿವಾಳ ವೃತ್ತ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ಅನಗತ್ಯವಾಗಿ ಸಂಚರಿಸುತ್ತಿದ್ದವರನ್ನು ತಡೆದು ವಿಚಾರಿಸಿದರು. ಕಾರಣವಿಲ್ಲದೆ ಓಡಾಡುತ್ತಿದ್ದವರ ವಾಹನ ಜಪ್ತಿ ಮಾಡಿದರು. ಮಾಸ್ಕ್‌ ಧರಿಸದವರಿಗೆ ದಂಡ ವಿಧಿಸಿದರು.

ಗಾಂಧಿ ಗಂಜ್‌, ಮೋಹನ್‌ ಮಾರ್ಕೆಟ್, ಓಲ್ಡ್‌ ಸಿಟಿ, ಶಿವನಗರ, ಮೈಲೂರು ಕ್ರಾಸ್, ಚಿದ್ರಿ ರಸ್ತೆ ಬಿಕೋ ಎನ್ನುತ್ತಿದ್ದವು. ಮೆಡಿಕಲ್ ಶಾಪ್, ತರಕಾರಿ, ಕಿರಾಣಾ ಅಂಗಡಿಗಳು ಮಾತ್ರ ತೆರೆದುಕೊಂಡಿದ್ದವು. ಆದರೆ, ಗ್ರಾಹಕರೇ ಇರಲಿಲ್ಲ.
ಹೋಟೆಲ್, ಖಾನಾವಳಿಗಳಲ್ಲಿ ಪಾರ್ಸೆಲ್ ಸೇವೆಗೆ ಅವಕಾಶ ನೀಡಲಾಗಿತ್ತು. ಗ್ರಾಹಕರು ಬಾರದ ಕಾರಣ ಹೋಟೆಲ್‌ ಮಾಲೀಕರು ನಷ್ಟ ಅನುಭವಿಸಿದರು.

ದೇವಸ್ಥಾನಗಳಲ್ಲಿ ಎಂದಿನಂತೆ ಪೂಜೆಗಳು ನಡೆದವು. ದೇಗುಲಗಳಲ್ಲಿ ಭಕ್ತರು ಕಂಡು ಬರಲಿಲ್ಲ. ಪ್ರವಾಸಿ ತಾಣಗಳೂ ಬಿಕೋ ಎನ್ನುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.