ADVERTISEMENT

ಬೀದರ್‌ | ದಿನವಿಡೀ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 14:24 IST
Last Updated 20 ಜುಲೈ 2024, 14:24 IST
ಸತತ ಮಳೆಗೆ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣ ಎದುರಿನ ಉದಗೀರ್‌ ರಸ್ತೆಯಲ್ಲಿ ಶನಿವಾರ ಅಪಾರ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು
ಸತತ ಮಳೆಗೆ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣ ಎದುರಿನ ಉದಗೀರ್‌ ರಸ್ತೆಯಲ್ಲಿ ಶನಿವಾರ ಅಪಾರ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಡಕಾಯಿತು   

ಬೀದರ್‌: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ದಿನವಿಡೀ ಜಿಟಿಜಿಟಿ ಮಳೆ ಸುರಿದ ಕಾರಣ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಶನಿವಾರ ಬೆಳಿಗ್ಗೆ ಶಾಲಾ–ಕಾಲೇಜು, ಕಚೇರಿ ಕೆಲಸ ಸೇರಿದಂತೆ ದೈನಂದಿನ ಕೆಲಸಗಳಿಗೆ ಹೋಗುವವರು ಮಳೆಯಿಂದ ತೀವ್ರ ಪರದಾಟ ನಡೆಸಿದರು. ಕೊಡೆಗಳನ್ನು ಮಳೆಯಲ್ಲೇ ಹೆಜ್ಜೆ ಹಾಕುತ್ತಿರುವ ದೃಶ್ಯ ಕಂಡು ಬಂತು. ಸಂಜೆ ವೇಳೆಗೂ ಮಳೆ ಮುಂದುವರಿದ ಕಾರಣ ಮನೆ ಸೇರಬೇಕಾದವರು ಪರದಾಡಿದರು.

ಪ್ರಮುಖ ರಸ್ತೆಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸಂಚಾರ ನಿಧಾನಗೊಂಡಿತು. ಮಳೆಯಿಂದಾಗಿ ಆಟೊಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂತು. ಗುಂಡಿಗಳಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ನಗರದ ಹಲವೆಡೆ ಚರಂಡಿಗಳು ಉಕ್ಕಿ ಹರಿದವು. ಆಟೊದವರು ಚೌಕಾಸಿಗೆ ಅವಕಾಶವೇ ಕೊಡಲಿಲ್ಲ. ಇದೇ ಸಂದರ್ಭವೆಂದು ಜನರಿಂದ ಎಂದಿಗಿಂತ ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಟ್ಟು ಪಡೆದರು.

ADVERTISEMENT

ಬಿಟ್ಟೂ ಬಿಡದೇ ಮಳೆ ಸುರಿದ ಕಾರಣ ಸಂಜೆ ಮನೆ ಸೇರಿದವರೂ ಪುನಃ ಹೊರಗೆ ಬರಲಿಲ್ಲ. ವ್ಯಾಪಾರ ವಹಿವಾಟು ಹೇಳಿಕೊಳ್ಳುವಂತಹ ರೀತಿಯಲ್ಲಿ ಇರಲಿಲ್ಲ.

ಶುಕ್ರವಾರ ಸಂಜೆ ಆರಂಭಗೊಂಡ ಮಳೆ ರಾತ್ರಿಯಿಡೀ ಸುರಿಯಿತು. ನಸುಕಿನ ಜಾವ ಕೆಲಸಮಯ ಬಿಡುವು ಕೊಟ್ಟ ಮಳೆರಾಯ ದಿನವಿಡೀ ಸುರಿದ. ಜಿಲ್ಲೆಯ ಬೀದರ್‌, ಬಸವಕಲ್ಯಾಣ, ಔರಾದ್‌, ಚಿಟಗುಪ್ಪ, ಹುಮನಾಬಾದ್‌, ಭಾಲ್ಕಿ, ಹುಲಸೂರ, ಕಮಲನಗರ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ಮಳೆಗಾಲ ಆರಂಭಗೊಂಡ ನಂತರ ಹಗಲು–ರಾತ್ರಿ ಮಳೆ ಸುರಿದದ್ದು ಇದೇ ಮೊದಲು. ಸತತ ಮಳೆಗೆ ವಾತಾವರಣ ಸಂಪೂರ್ಣ ತಂಪಾಗಿದೆ. ಮಳೆಯ ನಿರೀಕ್ಷೆಯಲ್ಲಿದ್ದ ರೈತರು ಸಂತಸಗೊಂಡಿದ್ದಾರೆ.

ಸುರಿವ ಮಳೆಯಲ್ಲೇ ಬೀದರ್‌ನಲ್ಲಿ ಶನಿವಾರ ಕೆಲ ಮಹಿಳೆಯರು ಕೊಡೆ ಹಿಡಿದುಕೊಂಡು ಹೆಜ್ಜೆ ಹಾಕಿದರೆ ಕೆಲವರು ನೆನೆದುಕೊಂಡೇ ಹೋದರು
ಬೀದರ್‌ ಕೇಂದ್ರ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರು ಶನಿವಾರ ಕೊಡೆಗಳನ್ನು ಆಶ್ರಯಿಸಿಕೊಂಡು ಓಡಾಡಿದರು –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.