ಭಾಲ್ಕಿ: ವಿದ್ಯಾರ್ಥಿಗಳು ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ನಿರಂತರ ಪರಿಶ್ರಮ ಪಟ್ಟಲ್ಲಿ ಅಸಾಧ್ಯವೂ ಸಾಧ್ಯವಾಗುತ್ತದೆ ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಂಕುಶ ಢೋಲೆ ಹೇಳಿದರು. ಪಟ್ಟಣದ ಚನ್ನಬಸವೇಶ್ವರ ಪದವಿ ಕಾಲೇಜಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆ ಪಾಸಾದ ವಾಣಿಜ್ಯ ವಿಭಾಗದ ಗಣೇಶ ಸಂಜುಕುಮಾರ ಕುಡತೆ, ಉಷಾ ಶಿವದತ್ತ ರಾಠೋಡ್ ಅವರನ್ನು ಸನ್ಮಾನಿಸಿ ಮಾತನಾಡಿದರು. ನಮ್ಮ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಅವರು ಕಾಳಜಿ ವಹಿಸಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಿ.ಎ.ಫೌಂಡೇಶನ್ ತರಗತಿಗಳನ್ನು ನಡೆಸಲು ಅನುವು ಮಾಡಿಕೊಟ್ಟಿದ್ದರ ಪರಿಣಾಮವಾಗಿ ವಿದ್ಯಾರ್ಥಿಗಳಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ಪ್ರಾಚಾರ್ಯ ರಮೇಶ ಪಾಟೀಲ ಮಾತನಾಡಿ, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯ ಫಲಿತಾಂಶದೊಂದಿಗೆ ಚನ್ನಬಸವೇಶ್ವರ ಕಾಲೇಜು ಜಿಲ್ಲೆಯಲ್ಲಿ ಹೊಸ ಶಕೆ ಪ್ರಾರಂಭಿಸಿದೆ. ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಚಾರ್ಟಡ್ ಅಕೌಂಟೆಂಟ್ ಪರೀಕ್ಷೆಯಲ್ಲೂ ಗ್ರಾಮೀಣ ವಿದ್ಯಾರ್ಥಿಗಳು ಪಾಸಾಗಬಹುದು ಎಂದು ಸಾಬೀತು ಪಡಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಪಾಲಕರಾದ ಶಿವದತ್ತ ರಾಠೋಡ್, ಅನಿತಾ ಕುಡತೆ ಉಪ ಪ್ರಾಚಾರ್ಯ ಸಂತೋಷ ತೀರ್ಥೆ ಎಚ್.ಆರ್.ಮ್ಯಾನೇಜರ್ ಗುರುನಾಥ ಕುಡತೆ, ವಿಜಯಲಕ್ಷ್ಮೀ ಗಡ್ಡೆ, ಶಿವಕುಮಾರ ಜಗನ್ನಾಥ, ಭೀಮಣ್ಣ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.