ADVERTISEMENT

ಬೀದರ್‌ನಲ್ಲೊಂದು ವಿಶ್ವ ದರ್ಜೆ ಟೆನಿಸ್‌ ಕೋರ್ಟ್‌

ಪ್ರಶಾಂತ ವಾತಾವರಣದಲ್ಲಿ ಟೆನಿಸ್‌ ಆಟಗಾರರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವ ಕೋರ್ಟ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಜೂನ್ 2025, 6:16 IST
Last Updated 15 ಜೂನ್ 2025, 6:16 IST
ಬೀದರ್‌ನ ಹಬ್ಸಿ ಕೋಟೆ ಅತಿಥಿ ಗೃಹ ಸಮೀಪದ ಬೀದರ್‌ ಪೊಲೀಸ್‌ ಟೆನಿಸ್‌ ಕ್ಲಬ್‌ಗೆ ಸೇರಿದ ಟೆನಿಸ್‌ ಕೋರ್ಟ್‌
ಬೀದರ್‌ನ ಹಬ್ಸಿ ಕೋಟೆ ಅತಿಥಿ ಗೃಹ ಸಮೀಪದ ಬೀದರ್‌ ಪೊಲೀಸ್‌ ಟೆನಿಸ್‌ ಕ್ಲಬ್‌ಗೆ ಸೇರಿದ ಟೆನಿಸ್‌ ಕೋರ್ಟ್‌   

ಬೀದರ್‌: ನಗರದ ಹಬ್ಸಿ ಕೋಟೆ ಅತಿಥಿ ಗೃಹ ಸಮೀಪದ ಪೊಲೀಸ್‌ ಗೆಸ್ಟ್‌ಹೌಸ್‌ ಬಳಿ ನಿರ್ಮಿಸಿರುವ ವಿಶ್ವ ದರ್ಜೆಯ ಟೆನಿಸ್‌ ಕೋರ್ಟ್‌, ಟೆನಿಸ್‌ ಆಟಗಾರರನ್ನು ಸೂಜಿಗಲ್ಲಿನಂತೆ ತನ್ನತ್ತ ಆಕರ್ಷಿಸುತ್ತಿದೆ.

ಅತ್ಯುತ್ತಮ ನಿರ್ವಹಣೆಯಿಂದಾಗಿ ನೆರೆಯ ಕಲಬುರಗಿ ಜಿಲ್ಲೆಯ ಆಟಗಾರರು, ಐಎಎಸ್‌, ಐಪಿಎಸ್‌ ಸೇರಿದಂತೆ ವಿವಿಧ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಇಲ್ಲಿಗೆ ಬಂದು ಟೆನಿಸ್‌ ಆಡಿ ಹೋಗುತ್ತಿದ್ದಾರೆ. ಇದರಿಂದಲೇ ಇದರ ಮಹತ್ವ ಮನಗಾಣಬಹುದು.

ಕ್ರೀಡೆಯೆಂದರೆ ಕೇವಲ ಕ್ರಿಕೆಟ್‌ ಎಂಬ ಭಾವನೆಯಿದ್ದು, ಅದನ್ನು ಹೋಗಲಾಡಿಸಿ ಟೆನಿಸ್‌ ಬಗ್ಗೆ ಒಲವು ಹೊಂದಿರುವವರಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಟೆನಿಸ್‌ ಕೋರ್ಟ್‌ ಅಭಿವೃದ್ಧಿಪಡಿಸಲಾಗಿದೆ.

ADVERTISEMENT

ಒಟ್ಟು ನಾಲ್ಕು ಕೋರ್ಟ್‌ಗಳಿದ್ದು, ಎರಡು ಮಣ್ಣಿನಿಂದ ಕೂಡಿದರೆ, ಇನ್ನೆರಡು ಸಿಂಥೆಟಿಕ್‌ನಿಂದ ನಿರ್ಮಿಸಲಾಗಿದೆ. ಬೀದರ್‌ ಪೊಲೀಸ್‌ ಟೆನಿಸ್‌ ಕ್ಲಬ್‌ (ಬಿಪಿಟಿಸಿ) ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇದರ ಕಾಯಂ ಅಧ್ಯಕ್ಷರಾಗಿದ್ದಾರೆ. ವಿವಿಧ ವಲಯದ 35 ಜನರು ಇದರ ಸದಸ್ಯರಾಗಿದ್ದಾರೆ.

ಎನ್‌.ಸತೀಶ ಅವರು ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇದ್ದಾಗ ಟೆನಿಸ್‌ ಕೋರ್ಟ್‌ ಅಭಿವೃದ್ಧಿಪಡಿಸಿದ್ದರು. ಆನಂತರ ಬಂದ ಎಲ್ಲ ಎಸ್‌.ಪಿಗಳು ಹಾಗೂ ಬಿಪಿಟಿಸಿ ಸದಸ್ಯರ ಕಾಳಜಿಯಿಂದ ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಇಳಿಜಾರಿನಿಂದ ಕೂಡಿದ ಪ್ರದೇಶವನ್ನು ಮಣ್ಣಿನಿಂದ ಸಮತಟ್ಟು ಮಾಡಿ ಈ ಟೆನಿಸ್‌ ಅಂಗಳ ನಿರ್ಮಿಸಲಾಗಿದ್ದು, ಪ್ರಕೃತಿಯ ಮಡಿಲಲ್ಲಿದೆ. ಪ್ರಶಾಂತ ವಾತಾವರಣದಲ್ಲಿ ಆಟಗಾರರು ಆಟದ ಕಡೆಗೆ ಸಂಪೂರ್ಣ ಚಿತ್ತಹರಿಸಿ ಆಡುವುದಕ್ಕೆ ಸೂಕ್ತ ಸ್ಥಳ ಎನ್ನುತ್ತಾರೆ ಟೆನಿಸ್‌ ಪ್ರಿಯರು.

ಟೆನಿಸ್‌ ದುಬಾರಿ ಕ್ರೀಡೆ. ಸ್ಥಳೀಯರಲ್ಲೂ ಇದರ ಬಗ್ಗೆ ಅಭಿರುಚಿ ಬೆಳೆಯಬೇಕು. ತರಬೇತಿಗೂ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಟೆನಿಸ್‌ ಕೋರ್ಟ್‌ ನಿರ್ಮಿಸಲಾಗಿದೆ.
–ರವಿ ಮೂಲಗೆ ಸದಸ್ಯ ಬಿಪಿಟಿಸಿ
ಬೀದರ್‌ ಟೆನಿಸ್‌ ಕೋರ್ಟ್‌ನಲ್ಲಿ ಒಂದು ಸಲ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆದಿದೆ. ಇದರಿಂದಲೇ ಅದರ ಮಹತ್ವ ಅರಿಯಬಹುದು. ಅತ್ಯುತ್ತಮ ನಿರ್ವಹಣೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ.
– ಡಾ. ರಘು ಕೃಷ್ಣಮೂರ್ತಿ, ಸದಸ್ಯ ಬಿಪಿಟಿಸಿ

ಐಟಿಎಫ್‌ ಮಹಿಳಾ ಟೂರ್ನಿ ಹೆಗ್ಗಳಿಕೆ

ಬೀದರ್‌ ಪೊಲೀಸ್‌ ಟೆನಿಸ್‌ ಕ್ಲಬ್‌ನಲ್ಲಿ (ಬಿಪಿಟಿಸಿ) 2015–16ರಲ್ಲಿ ಇಂಟರ್‌ನ್ಯಾಷನಲ್‌ ಟೆನಿಸ್‌ ಫೆಡರೇಶನ್‌ನಿಂದ (ಐಟಿಎಫ್‌) ಅಂತರರಾಷ್ಟ್ರೀಯ ಮಟ್ಟದ ಮಹಿಳೆಯರ ಟೂರ್ನಿ ಆಯೋಜಿಸಿದ ಹೆಗ್ಗಳಿಕೆ ಇದಕ್ಕಿದೆ. ವರ್ಷವಿಡೀ ರಾಜ್ಯಮಟ್ಟದ ಉತ್ತರ ಕರ್ನಾಟಕ ಮಟ್ಟದ ಸ್ಪರ್ಧೆಗಳು ಜರುಗುತ್ತಿರುತ್ತವೆ. ಇದರ ಮೂಲಕ ಯುವ ಟೆನಿಸ್‌ ಆಟಗಾರರ ಸಂವಾದ ಕ್ರೀಡೆ ಬಗ್ಗೆ ಹೆಚ್ಚಿನ ಜ್ಞಾನ ಪಡೆಯಲು ವೇದಿಕೆಯಾಗಿ ಮಾರ್ಪಟ್ಟಿದೆ.

ಬಿಪಿಟಿಸಿಯಿಂದ ಹಲವು ಚಟುವಟಿಕೆ

ಬೀದರ್‌ ಪೊಲೀಸ್‌ ಟೆನಿಸ್‌ ಕ್ಲಬ್‌ (ಬಿಪಿಟಿಸಿ) ಚಟುವಟಿಕೆಗಳು ಟೆನಿಸ್‌ ಆಟಕ್ಕಷ್ಟೇ ಸೀಮಿತವಾಗಿಲ್ಲ. ಟ್ರೇಕಿಂಗ್‌ ಸೈಕ್ಲಿಂಗ್‌ ಬೈಕಿಂಗ್‌ ಹಾಗೂ ಸ್ವಿಮಿಂಗ್‌ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಕೆಲಸ ಮಾಡುತ್ತಿದೆ. ಟೆನಿಸ್‌ ಕೋರ್ಟ್‌ ನಿರ್ವಹಣೆಗೆ ಐದು ಜನ ‘ಬಾಲ್‌ ಬಾಯ್‌ ಅಂಡ್‌ ಮಾರ್ಕರ್‌’ಗಳನ್ನು ನೇಮಿಸಲಾಗಿದೆ. ಇವರು ನಿತ್ಯ ಟೆನಿಸ್‌ ಅಂಗಳದ ಮೇಲೆ ರೋಲ್‌ ಮಾಡಿ ಗೆರೆ ಅಳೆದು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ. ಕಿರಿಯರಿಗೆ ಕೋಚ್‌ ವ್ಯವಸ್ಥೆ ಕೂಡ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.