ADVERTISEMENT

ಜಯದೇವದಲ್ಲಿ ಹೈಟೆಕ್‌ ಕ್ಯಾತ್‌ಲ್ಯಾಬ್‌ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 5:40 IST
Last Updated 6 ಡಿಸೆಂಬರ್ 2020, 5:40 IST
ಕಲಬುರ್ಗಿಯ ಜಯದೇವ ಆಸ್ಪತ್ರೆಯಲ್ಲಿ ಅಳವಡಿಸಿದ ಎರಡನೇ ಕಾರ್ಡಿಯಾಕ್‌ ಕ್ಯಾತ್‌ಲ್ಯಾಬ್‌ ಅನ್ನು ಡಾ.ಸಿ.ಎನ್‌. ಮಂಜುನಾಥ ಅವರು, ರೋಗಿಯೊಬ್ಬರಿಗೆ ಸ್ಟಂಟ್‌ ಅಳವಡಿಸುವ ಮೂಲಕ ಶನಿವಾರ ಉದ್ಘಾಟಿಸಿದರು
ಕಲಬುರ್ಗಿಯ ಜಯದೇವ ಆಸ್ಪತ್ರೆಯಲ್ಲಿ ಅಳವಡಿಸಿದ ಎರಡನೇ ಕಾರ್ಡಿಯಾಕ್‌ ಕ್ಯಾತ್‌ಲ್ಯಾಬ್‌ ಅನ್ನು ಡಾ.ಸಿ.ಎನ್‌. ಮಂಜುನಾಥ ಅವರು, ರೋಗಿಯೊಬ್ಬರಿಗೆ ಸ್ಟಂಟ್‌ ಅಳವಡಿಸುವ ಮೂಲಕ ಶನಿವಾರ ಉದ್ಘಾಟಿಸಿದರು   

ಕಲಬುರ್ಗಿ: ‘ಈ ಭಾಗದ ಹೃದ್ರೋಗಿಗಳಿಗೆ ಶೀಘ್ರ ಹಾಗೂ ಗುಣಮಟ್ಟದ ಚಿಕತ್ಸೆ ನೀಡಲು ಬೇಕಾದ ಎಲ್ಲ ಸವಲತ್ತುಗಳನ್ನು ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ’ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ ಹೇಳಿದರು.

ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಹೊಸದಾಗಿ ತೆರೆಯಲಾದ ಹೃದ್ರೋಗಕ್ಕೆ ಸಂಬಂಧಿಸಿದ ಕಾರ್ಡಿಯಾಕ್‌ ಕ್ಯಾತ್‌ಲಾಬ್‌ ಅನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಹಿಂದೆಯೇ ಒಂದು ಸುಸಜ್ಜಿತ ಪ್ರಯೋಗಾಲಯವನ್ನು ಜಯದೇವದಲ್ಲಿ ಅಳವಡಿಸಲಾಗಿದೆ. ಅದರೆ, ಈ ಭಾಗದಲ್ಲಿ ಆಸ್ಪತ್ರೆಗೆ ಬರುವ ಹೃದ್ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ರೋಗಿಗಳನ್ನು ಹೆಚ್ಚು ಸಮಯ ಕಾಯಿಸಬಾರದು. ಜತೆಗೆ, ಗುಣಮಟ್ಟದ ಚಿಕಿತ್ಸೆಯೂ ದೊರೆಯಬೇಕು ಎಂಬ ಉದ್ದೇಶದಿಂದ ಅತ್ಯಾಧುನಿಕ ಸೌಲಭ್ಯವುಳ್ಳ ಎರಡನೇ ಲ್ಯಾಬ್‌ ಆರಂಭಿಸಲಾಗಿದೆ‌’ ಎಂದು ವಿವರಿದರು.

ADVERTISEMENT

‌‘ಆಂಜಿಯೋಗ್ರಾಂ, ಆಂಜಿಯೀಪ್ಲಾಸ್ಟಿ ಹಾಗೂ ಸ್ಟಂಟ್‌ ಅಳವಡಿಕೆ, ಫೇಸ್‌ಮೇಕರ್‌ ಮುಂತಾದ ಹೃದಯ ಸಂಬಂಧಿ ಪ್ರಕ್ರಿಯೆಗಳನ್ನು ಶೀಘ್ರ ನಿರ್ವಹಿಸಲು ಇದು ಸಹಕಾರಿಯಾಗಲಿದೆ’ ಎಂದು ಡಾ.ಮಂಜುನಾಥ ತಿಳಿಸಿದರು.

ಸಂಸ್ಥೆಯ ಕಲಬುರ್ಗಿ ಶಾಖೆಯ ಹೃದ್ರೋಗ ತಜ್ಞ ಡಾ.ವೀರೇಶ ಪಾಟೀಲ ಮಾತನಾಡಿ, ‘ಕಲಬುರ್ಗಿ ಶಾಖೆಯು 2016ನೇ ಸಾಲಿನಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ 20 ಸಾವಿರಕ್ಕೂ ಹೆಚ್ಚು ಕ್ಯಾತ್‌ಲ್ಯಾಬ್‌ ಪ್ರಕ್ರಿಯೆ, 5000ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ– ಸ್ಟಂಟ್ ಅಳವಡಿಕೆ, 150ಕ್ಕೂ ಹೆಚ್ಚು ಫೇಸ್‌ಮೇಕರ್‌ ಅಳವಡಿಕೆ, 500ಕ್ಕೂ ಹೆಚ್ಚು ತೆರೆದ ಹೃದಯ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ’ ಎಂದು ಮಾಹಿತಿ ನೀಡಿದರು.

ಡಾ.ಸಂದೀಪ ಬಿಜಾಪುರ, ಡಾ.ಆನಂದ ಕಟಗೇರಿ, ಡಾ.ರಾಜೀವ್‌ ಕೋಣಿನ್‌, ಡಾ.ಸಚಿನ್‌ ಜಿ. ಹಾಗೂ ಸಿಒಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.