ಯಳಂದೂರು: ತಾಲ್ಲೂಕಿನ ಯರಗಂಬಳ್ಳಿ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿಗೆ ಕೊಟ್ಟಿರುವ ಆಹಾರದಲ್ಲಿ ಹುಳು ತುಂಬಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ 2 ನೇ ಅಂಗನವಾಡಿ ಕೇಂದ್ರದ ವತಿಯಿಂದ ಶಿವಮ್ಮ ಎಂಬ ಬಾಣಂತಿಗೆ ರವೆ ನೀಡಲಾಗಿತ್ತು. ಪ್ಯಾಕೆಟ್ ಬಿಚ್ಚಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಏಕೆಂದರೆ ಇದರ ತುಂಬಾ ಬಿಳಿ ಕಂದು ಮಿಶ್ರಿತ ಹುಳುಗಳು ಹರಿಯುತ್ತಿದ್ದವು.
ಗಾಬರಿಗೊಂಡ ಪೋಷಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತೋರಿಸಿದರು. `ಗರ್ಭಿಣಿ, ಬಾಣಂತಿಯರು ಹಾಗೂ ಅಂಗನವಾಡಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು ಎಂಬ ನಿಯಮವಿದೆ. ಆದರೂ ಆಗಾಗ ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದನ್ನು ಪೂರೈಕೆ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಕಾಲ ಸೇವಾ ಕೇಂದ್ರ ನಿರ್ವಹಣೆಗೆ ಅರ್ಜಿ ಆಹ್ವಾನ
ಚಾಮರಾಜನಗರ: ಕರ್ನಾಟಕ ನಾಗರಿಕ ಸೇವಾ ಅಧಿನಿಯಮದಡಿ (ಸಕಾಲ) ಬರುವ ಸೇವೆಗಳ ಸಂಬಂಧ ನಾಗರಿಕರಿಂದ ಅರ್ಜಿ ಸ್ವೀಕರಿಸಲು ಗಣಕಯಂತ್ರ, ಅಂತರ್ಜಾಲ ಸೇರಿದಂತೆ ಇತರೇ ತಂತ್ರಜ್ಞಾನ ಸಾಮಗ್ರಿ ಹೊಂದಿರುವ ಕೇಂದ್ರ ಹಾಗೂ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡುತ್ತಿರುವ ಹಾಗೂ ಆನ್‌ಲೈನ್ ಟಿಕೆಟ್ ನೀಡುವ ಕೇಂದ್ರಗಳು, ಸರ್ಕಾರಿ ಸಂಚಾರಿ ಟಿಕೆಟ್ ಒದಗಿಸುವ ಕೇಂದ್ರಗಳು (ರೈಲು, ಸಾರಿಗೆ) ಅಂತರ್ಜಾಲ ಸಂಪರ್ಕ ಹೊಂದಿರುವ ಕೇಂದ್ರ (ಸೈಬರ್ ಕೆಫೆ, ವೆಬ್ ಪಾರ್ಲರ್), ಸ್ಕ್ಯಾನರ್ ಗಣಕಯಂತ್ರ, ಮುದ್ರಣ ಸಾಮಗ್ರಿ, ಅಂತರ್ಜಾಲ ಮೂಲಕ ದೃಶ್ಯ ಸಂಗ್ರಹಿಸುವವರು, ವೆಬ್ ಕ್ಯಾಮೆರಾ ಹೊಂದಿರುವವರು, ಬಯೊಮೆಟ್ರಿಕ್ ತಂತ್ರಜ್ಞಾನ ಸಾಮಗ್ರಿ ಹೊಂದಿರುವವರು, ಫೋಟೊ ಸ್ಟುಡಿಯೊ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಜೂ. 29ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.