ADVERTISEMENT

ಅರೆಬರೆ ಕಾಮಗಾರಿ; ಪ್ರಾಣಕ್ಕೆ ಕಂಠಕ

ಭುವನೇಶ್ವರಿ, ಸಂತೇಮರಹಳ್ಳಿ ವೃತ್ತದಲ್ಲಿ ಸಂಚಾರ ದೀಪಗಳಿಲ್ಲ

ಕೆ.ಎಸ್.ಗಿರೀಶ್
Published 28 ಮೇ 2018, 10:18 IST
Last Updated 28 ಮೇ 2018, 10:18 IST
ಬಿ.ರಾಚಯ್ಯ ಜೋಡಿ ರಸ್ತೆಯ ಪೊಲೀಸ್ ವಸತಿ ಗೃಹದ ಮುಂಭಾಗದ ದೊಡ್ಡ ಮೋರಿ ಸ್ಥಿತಿ ಹೀಗಿದೆ
ಬಿ.ರಾಚಯ್ಯ ಜೋಡಿ ರಸ್ತೆಯ ಪೊಲೀಸ್ ವಸತಿ ಗೃಹದ ಮುಂಭಾಗದ ದೊಡ್ಡ ಮೋರಿ ಸ್ಥಿತಿ ಹೀಗಿದೆ   

ಚಾಮರಾಜನಗರ: ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸದೇ ಇರುವುದು ಅಪಾಯಕ್ಕೆ ಎಡೆ ಮಾಡಿದೆ. ಅರೆಬರೆ ಕಾಮಗಾರಿಗಳಿಂದ ಜನರು ಹಾಗೂ ಪ್ರಾಣಿಗಳ ಜೀವಕ್ಕೆ ಎರವಾಗುವ ಸಾಧ್ಯತೆ ಇದೆ.

ಇಲ್ಲಿನ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಪೊಲೀಸ್ ವಸತಿಗೃಹದ ಮುಂಭಾಗ ಹಾಗೂ ಇದೇ ರಸ್ತೆಯಲ್ಲಿನ ವಿದ್ಯಾವಿಕಾಸ ಕಾಲೇಜಿನ ಮುಂಭಾಗ ದೊಡ್ಡ ಮೋರಿ ನಿರ್ಮಾಣ ಕಾಮಗಾರಿ ನಡೆದು ಹಲವು ತಿಂಗಳೇ ಕಳೆದಿವೆ. ಆದರೆ, ಮೋರಿ ಕಟ್ಟೆಯ ಮೇಲೆ ಕಟ್ಟುವುದಕ್ಕೆ ಬಳಸಲಾದ ಕಬ್ಬಿಣದ ಸರಳುಗಳು ಇನ್ನೂ ಹಾಗೆ ಇವೆ. ಇವು ಅಪಾಯಕ್ಕೆ ಆಹ್ವಾನ ನೀಡಿವೆ.‌

ಇದರ ಬದುಗಳಲ್ಲಿ ಜಾನುವಾರುಗಳು ನಡೆಯುವಾಗ ಅಥವಾ ಅವುಗಳು ಮೈಯನ್ನು ತುರುಸಿಕೊಳ್ಳಲು ಇದನ್ನು ಬಳಸಿದಾಗ ದೇಹವನ್ನು ಚುಚ್ಚುವ ಸಾಧ್ಯತೆ ಇದೆ. ಹೆಚ್ಚಾಗಿ ಪ್ರಾಣಿಗಳಿಗೆ ಇವುಗಳಿಂದ ಅಪಾಯ ಎದುರಾಗಿದೆ. ಇದರ ಜತೆಗೆ, ಮಕ್ಕಳು ಇದರ ಕಟ್ಟೆಯ ಮೇಲೆ ನಡೆಯುವಾಗ ಸ್ವಲ್ಪ ಆಯಾ ತಪ್ಪಿ ಬಿದ್ದರೂ ಕಬ್ಬಿಣದ ಸರಳುಗಳು ದೇಹವನ್ನು ಹೊಕ್ಕುವ ಸಾಧ್ಯತೆ ಅಧಿಕ ಎನಿಸಿದೆ.

ADVERTISEMENT

ಮೋರಿಗೆ ಗೋಡೆ ಕಟ್ಟಲು ಈ ಕಬ್ಬಿಣದ ಸರಳುಗಳನ್ನು ಹಾಕಲಾಗಿತ್ತು. ಸಿಮೆಂಟ್‌ನಿಂದ ಗೋಡೆ ಕಟ್ಟಿದ ಬಳಿಕ ಕಾಮಗಾರಿ ಮಾಡಿದವರು ಇದರ ಸರಳುಗಳನ್ನು ಕತ್ತರಿಸಬೇಕಿತ್ತು. ಆದರೆ, ಅವರು ಹಾಗೆ ಮಾಡದೇ ಸರಳುಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಇವುಗಳ ಹತ್ತಿರ ಯಾರಾದರೂ ಮದ್ಯಸೇವಿಸಿ ತೂರಾಡುವವರು ಸುಳಿದಾಡುವುದು ಸಾಮಾನ್ಯ. ಕೆಲವರು ಇವುಗಳ ಪಕ್ಕದಲ್ಲೇ ಕೂರುತ್ತಾರೆ. ಮಕ್ಕಳು ಈ ಸರಳುಗಳ ಬಳಿ ಆಟವಾಡುತ್ತಾರೆ. ಇವರೆಲ್ಲರಿಗೂ ಇದು ಅಪಾಯ ಎನಿಸಿದೆ ಎಂದು ಭ್ರಮಾರಂಭ ಬಡಾವಣೆಯ ರಾಣಿ ಆತಂಕ ವ್ಯಕ್ತಪಡಿಸಿದರು.

ಸಂಚಾರ ದೀಪಗಳು ಯಾವಾಗ?

ಡಿವಿಯೇಷನ್ ರಸ್ತೆ ಕಾಮಗಾರಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗ ಹಾಗೂ ಚಾಮರಾಜೇಶ್ವರ ದೇವಸ್ಥಾನದ ಮುಂದೆ ರಸ್ತೆ ಕಾಮಗಾರಿಗಳು ಮುಗಿದಿವೆ. ವಾಹನ ಸಂಚಾರ ಮುಕ್ತಗೊಂಡಿದೆ. ಆದರೆ, ಭುವನೇಶ್ವರ ವೃತ್ತದಲ್ಲಿ (ಪಚ್ಚಪ್ಪ ವೃತ್ತ) ಸಂಚಾರ ದೀಪಗಳನ್ನು ಅಳವಡಿಸದೇ ಇರುವುದರಿಂದ ಸಂಚಾರ ದಟ್ಟಣೆ ಅಧಿಕವಾಗಿದೆ.

ಈ ಮೊದಲು ಇಲ್ಲೊಂದು ಸಂಚಾರ ದೀಪವಿತ್ತು. ಇವುಗಳಿಂದ ವಾಹಗಳ ದಟ್ಟಣೆಗೆ ಕಡಿವಾಣ ಬೀಳುತ್ತಿತ್ತು. ಆದರೆ, ಈಗ ಸಿಮೆಂಟ್ ರಸ್ತೆಯ ನೆವವೊಡ್ಡಿ ಅವುಗಳನ್ನೆಲ್ಲ ಹಾಳುಗೆಡವಲಾಗಿದೆ. ಜತೆಗೆ, ಬಿ.ರಾಚಯ್ಯ ಜೋಡಿ ರಸ್ತೆಯ ಒಂದು ಪಾರ್ಶ್ವದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಇಲ್ಲಿ ಕೇವಲ ಒಂದು ಪಾರ್ಶ್ವದಲ್ಲೇ ರಾಮಸಮುದ್ರದೆಡೆಗೆ ಹೋಗುವವರು ಅಲ್ಲಿಂದ ಬರುವವರೂ ಸಂಚರಿಸಬೇಕಿದೆ. ಇದೂ ಸಂಚಾರ ದಟ್ಟಣೆಗೆ ಕಾರಣವಾಗಿದೆ.

ಬೆಳಿಗ್ಗೆ ಸಮಯದಲ್ಲಿ ಹಾಗೂ ಸಂಜೆ ಸಮಯದಲ್ಲಿ ಇಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತದೆ. ಇದರಿಂದ ಜನಸಾಮಾನ್ಯರು ಹೈರಣಾಗುತ್ತಾರೆ. ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸುವ ವೃತ್ತ ಇದೇ ಆಗಿರುವುದರಿಂದ ವಾಹನ ದಟ್ಟಣೆಯಿಂದ ರೋಗಿಗಳು ಆತಂಕಕ್ಕೆ ಒಳಗಾಗುತ್ತಾರೆ. ಆದಷ್ಟು ಶೀಘ್ರ ಇಲ್ಲೊಂದು ಸಂಚಾರ ದೀಪವನ್ನು ಅಳವಡಿಸಬೇಕು ಎಂದು ಇಲ್ಲಿನ ಗುರುಪ್ರಸಾದ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.