ADVERTISEMENT

ಆತ್ಮವಿಶ್ವಾಸ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 11:30 IST
Last Updated 28 ಜನವರಿ 2012, 11:30 IST

ಕೊಳ್ಳೇಗಾಲ: ಆತ್ಮವಿಶ್ವಾಸ ಇದ್ದರೆ ಎಂತಹ ಸಾಧನೆ ಯನ್ನಾದರೂ ಮಾಡಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಸುತ್ತೂರು ಶ್ರೀ ಕ್ಷೇತ್ರ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ  ಮಾನಸ ಅಕ್ಷಯ ಯೋಜನೆ ನೂತನ ಸಂಕೀರ್ಣದ ಉದ್ಘಾಟನೆ ಮತ್ತು ಮಾನಸೋತ್ಸವ-2012 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಪ್ರಸ್ತುತ ಸಂಗತಿಗಳು ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ನಿರಾಶಾಭಾವನೆ ಸೃಷ್ಟಿಸುತ್ತಿವೆ. ಆದರೆ ದೇಶ ದಲ್ಲಿನ ಪ್ರಮುಖ ಸಂಗತಿಗಳನ್ನು ಸಕಾರಾತ್ಮಕವಾಗಿ ನೋಡುವ ಮೂಲಕ ಮತ್ತು ಆದರ್ಶ ವ್ಯಕ್ತಿಗಳ ಸಾಧನೆ ಮಾರ್ಗದಲ್ಲೇ ಬೆನ್ನತ್ತುವ ಮೂಲಕ ವಿದ್ಯಾರ್ಥಿಗಳು ಸಾಧನೆಗೆ ಮುಂದಾಗಬೇಕು ಎಂದು ಹೇಳಿದರು.

ಮಾನಸ ಶಿಕ್ಷಣ ಸಂಸ್ಥೆಯಿಂದಲೇ ಗ್ರಾಮೀಣ ಪ್ರದೇಶದ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳು ಹೊರ ಹೊಮ್ಮುತ್ತಿದ್ದು, ಇಡೀ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ. ಕೊಳ್ಳೇಗಾಲ ತಾಲ್ಲೂಕು ಹಿಂದುಳಿದ ತಾಲ್ಲೂಕು ಎಂದು ಹೇಳದೆ ಮುಂದುವರಿಯುತ್ತಿರುವ ತಾಲ್ಲೂಕು ಎಂದು ಹೇಳುವಂತೆ ಶ್ರೀಗಳು ಸಲಹೆ ನೀಡಿದರು.

ದೇಶದಲ್ಲಿ ಮಾನವ ಸಂಪನ್ಮೂಲ ಸಮರ್ಪಕವಾಗಿ ಸದ್ಬಳಕೆಯಾಗುತ್ತಿಲ್ಲ. ಭ್ರಷ್ಟಾಚಾರದಿಂದ ಅಸಮಾನತೆ ತಲೆ ಎತ್ತುತ್ತಿದೆ. ಯುವಕರಲ್ಲಿರುವ ನೈಜ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ನಡೆಯಬೇಕಿದೆ ಎಂದು ತಿಳಿಸಿದರು.

ವಾಟಾಳು ಶ್ರೀ ಸೂರ‌್ಯ ಸಿಂಹಾಸನ ಮಠದ ಸಿದ್ದಲಿಂಗ ಶಿವಾಚಾರ್ಯಸ್ವಾಮೀಜಿ ಆಶೀರ್ವಚನ ನೀಡಿದರು.
ಸಾಹಿತಿ ಡಾ. ಪ್ರಭುಶಂಕರ, ಪ್ರೊ. ಮಲೆಯೂರು ಗುರುಸ್ವಾಮಿ, ಡಾ.ಎಸ್.ಶಿವರಾಜಪ್ಪ, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ದತ್ತೇಶ್‌ಕುಮಾರ್, ಅಧ್ಯಕ್ಷ ನಾಗರಾಜ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.