ADVERTISEMENT

ಆನೆ ಹಿಂಡು ದಾಳಿ: ಜೋಳದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 21 ಜುಲೈ 2012, 7:25 IST
Last Updated 21 ಜುಲೈ 2012, 7:25 IST

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಹೋಬಳಿ ಹೊಸಪುರ ಗ್ರಾಮದ ರೈತ ಮಹಾದೇವೇಗೌಡ ಎಂಬುವವರ ಜಮೀನಿಗೆ ಕಾಡಾನೆಗಳ ಹಿಂಡು ಗುರುವಾರ ರಾತ್ರಿ ದಾಳಿ ನಡೆಸಿದ ಪರಿಣಾಮ ಸಾವಿರಾರು ರೂ. ಮೌಲ್ಯದ ಜೋಳದ ಬೆಳೆ ನಾಶವಾಗಿದೆ.

ಓಂಕಾರ ಅರಣ್ಯ ಪ್ರದೇಶದಿಂದ ಬಂದ ಕಾಡಾನೆಗಳ ಹಿಂಡು ರಾತ್ರಿ ಮಹಾದೇವೇಗೌಡ ಎಂಬ ರೈತರ ಜಮೀನಿನಲ್ಲಿ ವಾಸ್ತವ್ಯ ಹೂಡಿ ಜೋಳದ ಬೆಳೆ ನಾಶಪಡಿಸಿವೆ.

ಕಾಡಾನೆಗಳು ಬೇಗೂರು ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ನಿರಂತರವಾಗಿ ದಾಳಿ ನಡೆಸಿ ವಿವಿಧ ಬೆಳೆಗಳನ್ನು ನಾಶ ಪಡಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಈ ಬಾರಿ ಮುಂಗಾರು ಮಳೆಯೂ ವಿಫಲವಾಗಿದ್ದು, ಅಲ್ಪ ಸ್ವಲ್ಪ ಬೆಳೆದ ಬೆಳೆ ಕೈ ಸೇರುವ ಮುನ್ನವೇ  ಈ ರೀತಿ ಕಾಡು ಮೃಗಗಳ ಪಾಲಾಗುತ್ತಿದ್ದು ರೈತರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆ ಸೂಕ್ತ ಪರಿಹಾರವನ್ನು ಅತಿ ಶೀಘ್ರವಾಗಿ ಕೊಡಿಸಿ ಕೊಡ ಬೇಕೆಂದು ರೈತರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.