ADVERTISEMENT

ಆರ್ಥಿಕ ಸೇರ್ಪಡೆಗೆ 118 ಗ್ರಾಮ

​ಪ್ರಜಾವಾಣಿ ವಾರ್ತೆ
Published 8 ಜನವರಿ 2011, 8:45 IST
Last Updated 8 ಜನವರಿ 2011, 8:45 IST

ಚಾಮರಾಜನಗರ: ಜಿಲ್ಲೆಯ 118 ಗ್ರಾಮಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಿಂದ ಆರ್ಥಿಕ ಸೇರ್ಪಡೆ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ‘ಭದ್ರತೆಯೊಂದಿಗೆ ಸುಲಲಿತವಾಗಿ ಬ್ಯಾಂಕಿಂಗ್ ಸೇವೆ ದೊರೆಯುವಂತೆ ಮಾಡುವುದೇ ಆರ್ಥಿಕ ಸೇರ್ಪಡೆಯ ಮೂಲ ಉದ್ದೇಶ. ಗ್ರಾಮೀಣ ಮತ್ತು ಅಸಂಘಟಿತ ವಲಯಗಳಿಗೆ ಇದರಿಂದ ಉಪಯೋಗವಾಗಲಿದೆ. 17 ಎಸ್‌ಬಿಎಂ ಶಾಖೆಗಳ ಮೂಲಕ ಜಿಲ್ಲೆಯಲ್ಲಿ ಈ ತಿಂಗಳ ಅಂತ್ಯದೊಳಗೆ ಯೋಜನೆ ಜಾರಿಗೊಳ್ಳಲಿದೆ’ ಎಂದು ಬ್ಯಾಂಕ್‌ನ ಪ್ರಧಾನ ಕಚೇರಿಯ ಯೋಜನೆ ಮತ್ತು ಅಭಿವೃದ್ಧಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಭಯನಾಥ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 247 ಹಳ್ಳಿ ಮತ್ತು ತಮಿಳುನಾಡಿನ 13 ಗ್ರಾಮಗಳಲ್ಲಿ ಆರ್ಥಿಕ ಸೇರ್ಪಡೆ ಯೋಜನೆ ಅನುಷ್ಠಾನಗೊಳಿಸಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಾರ್ಗಸೂಚಿ ರೂಪಿಸಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಎಸ್‌ಎಸ್‌ಪಿಯಡಿ ಸರ್ಕಾರದ ಸೌಲಭ್ಯ ವಿತರಿಸುವ ದೃಷ್ಟಿಯಿಂದ ಆರ್ಥಿಕ ಸೇರ್ಪಡೆ ವ್ಯಾಪ್ತಿಯಲ್ಲಿ ವಿದ್ಯುನ್ಮಾನ ವರ್ಗಾವಣೆ ಯೋಜನೆ ಅಳವಡಿಸಲಾಗಿದೆ ಎಂದು ವಿವರಿಸಿದರು.

ಆರ್ಥಿಕ ಸೇರ್ಪಡೆ ಕೇವಲ ಖಾತೆ ತೆರೆಯುವಂಥ ಯಾಂತ್ರಿಕ ಪ್ರಕ್ರಿಯೆಯಲ್ಲ. ಸರ್ವತೋಮುಖ ಪ್ರಕ್ರಿಯೆಯಾಗಬೇಕು. ಆರ್ಥಿಕವಾಗಿ ಬಹಿಷ್ಕೃತರಿಗೆ ಹಣಕಾಸಿನ ನೆರವು ಮತ್ತು ಸೇವೆ ಲಭಿಸುತ್ತವೆ. ನಿಬಂಧನೆಗೊಳಪಟ್ಟು ಕಿಸಾನ್ ಕ್ರೆಡಿಟ್ ಕಾರ್ಡ್. ಮೈಕ್ರೋ ವಿಮೆ ಇತ್ಯಾದಿ ಸೌಲಭ್ಯ ಸಿಗಲಿವೆ ಎಂದರು. ಜ. 20ರೊಳಗೆ ಎಲ್ಲಾ 1 ಲಕ್ಷ ಫಲಾನುಭವಿಗಳನ್ನು ಎಸ್‌ಎಸ್‌ಪಿ ವ್ಯಾಪ್ತಿ ದಾಖಲಿಸಲಾಗುವುದು. ಸ್ಮಾರ್ಟ್‌ಕಾರ್ಡ್ ಕೂಡ ವಿತರಿಸಲಾಗುವುದು. ಮಾರ್ಚ್ ತಿಂಗಳ ಅಂತ್ಯದೊಳಗೆ ಪ್ರತಿ ಗ್ರಾಮದಲ್ಲೂ ಕನಿಷ್ಠ 300 ಖಾತೆ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಕುಮಾರಸ್ವಾಮಿ, ಉಪ ಪ್ರಧಾನ ವ್ಯವಸ್ಥಾಪಕರಾದ ಎನ್. ರಾಘವೇಂದ್ರ, ಎಂ.ಡಿ. ಶಿವಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.