ಯಳಂದೂರು: ತಾವು ಕಲಿತ ಸರ್ಕಾರಿ ಶಾಲೆಯ ಆಂಗ್ಲ ಭಾಷೆಯ ನಾಟಕದಲ್ಲಿ ನುಡಿಮುತ್ತು ಉದುರಿಸುವ ಚಿಣ್ಣರು. ಇದ್ದಕ್ಕಿಂದಂತೆಯೇ ಸಭಿಕರ ಮಧ್ಯದಿಂದಲೇ ಪ್ರತ್ಯಕ್ಷವಾಗುವ ಹುಲಿ ವೇಷಧಾರಿ. ತಾಳಕ್ಕೆ ತಕ್ಕಂತೆ ಹೆಜ್ಜೆಗಳನ್ನಿಡುವ ವಿದ್ಯಾರ್ಥಿಗಳು...
ಇವು ಆದರ್ಶ ಶಾಲೆಯ ವಿದ್ಯಾರ್ಥಿಗಳು ಪಟ್ಟಣದಲ್ಲಿ ನಡೆಯುವ ವಿವಿಧ ಸಭೆ ಸಮಾರಂಭಗಳಲ್ಲಿ ಮೂಡಿಸುವ ಛಾಪು.
2010-11 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಪಟ್ಟಣದ ಬಿಆರ್‌ಸಿ ಕೇಂದ್ರದಿಂದ ಆರಂಭವಾದ ಆದರ್ಶ ಶಾಲೆ 11-12 ನೇ ಸಾಲಿನಲ್ಲಿ ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಕಟ್ಟಡಕ್ಕೆ ವರ್ಗಾವಣೆಗೊಂಡಿತು.
ಅಲ್ಲಿಂದ ಹೊಸದಾಗಿ ಶಿಕ್ಷಕರ ಆಯ್ಕೆ ನಡೆಯಿತು. ಈ ಸಾಲಿನಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸದಾ ಮುಂದು.
ಇಲ್ಲಿನ ನಡೆಯುವ ರಾಷ್ಟ್ರೀಯ ಹಬ್ಬಗಳ ದಿನದಂದು ಹಾಗೂ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಲ್ಲಿ ಇಲ್ಲಿನ ಮಕ್ಕಳಿಗೆ ಪ್ರಶಸ್ತಿ ಕಟ್ಟಿಟ್ಟ ಬುತ್ತಿ. ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಕಲಿಯುವ ಇಲ್ಲಿನ ಚಿಣ್ಣರು ಅದೇ ಭಾಷೆ ಯಲ್ಲಿ ತಮ್ಮ ಪೋಷಕರು ಹಾಗೂ ಪ್ರೇಕ್ಷಕರ ಮಧ್ಯ ನಾಟಕವಾಡಿ ರಂಜಿಸುತ್ತಾರೆ.
ಜೋಕ್‌ಗಳನ್ನು ಹೇಳುತ್ತಾರೆ. `ಕೊಲವೆರಿ~ ಹಾಡಿಗೆ ಸ್ಥಳೀಯ ಕಲೆಯಾದ ದೇವರ ಕುಣಿತದ ಸ್ಟೆಪ್‌ಗಳನ್ನೂ ಸಂಗೀತಕ್ಕೆ ತಕ್ಕಂತೆ ಹಾಕುತ್ತಾರೆ.
ಛದ್ಮವೇಷದ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೂ ಇಲ್ಲಿನ ವಿದ್ಯಾರ್ಥಿ ಆಯ್ಕೆಯಾದ ಉದಾಹರಣೆಗಳು ಇವೆ. ಇವರ ಈ ಆಸಕ್ತಿಗೆ ಇಲ್ಲಿನ ಶಿಕ್ಷಕರು ಮತ್ತಷ್ಟು ಹುರುಪು ತುಂಬಿ ಮುಂದಿನ ದಿನಗಳಲ್ಲಿ ಇವರನ್ನು ಇನ್ನೂ ಚುರುಕುಗೊಳಿಸುವಲ್ಲಿ ಟೊಂಕ ಕಟ್ಟಿ ನಿಂತಿರುವುದು ಸುಳ್ಳಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.