ADVERTISEMENT

`ಉತ್ಸವಗಳಿಂದ ಆಧ್ಯಾತ್ಮಿಕ ಜಾಗೃತಿ'

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 8:30 IST
Last Updated 2 ಸೆಪ್ಟೆಂಬರ್ 2013, 8:30 IST

ಚಾಮರಾಜನಗರ: `ಮೊಸರು ಮಡಿಕೆ ಒಡೆಯುವ ಉತ್ಸವವು ಉತ್ತಮ ಧಾರ್ಮಿಕ ಕಾರ್ಯವಾಗಿದೆ. ಉತ್ಸವವು ಭಗವಂತನ ಸ್ಮರಣೆಗೆ ಅವಕಾಶ ನೀಡಿ, ಯುವಕರಲ್ಲಿ ಆಧ್ಯಾತ್ಮಿಕ ಮೌಲ್ಯ, ಆತ್ಮವಿಶ್ವಾಸ, ಧೈರ್ಯ, ಭಕ್ತಿಯ ಗುಣಗಳನ್ನು ಬೆಳೆಸುತ್ತದೆ' ಎಂದು ಮಂತ್ರಾಲಯದ ಶ್ರೀಗುರುರಾಘವೇಂದ್ರಸ್ವಾಮಿ ಮಠದ ಆಪ್ತ ಕಾರ್ಯದರ್ಶಿ ಎಸ್. ರಾಜಗೋಪಾಲಚಾರ್ಯ ಹೇಳಿದರು.

ನಗರದ ಶ್ರೀಕೃಷ್ಣ ಪ್ರತಿಷ್ಠಾನದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ನೇತೃತ್ವವಹಿಸಿದ್ದ ಮೈಸೂರಿನ ಇಸ್ಕಾನ್ ಸಂಸ್ಥೆಯ ಸರ್ವಾನಂದ ಗೌರಂಗದಾಸ್ ಮಾತನಾಡಿ, `ಕೃಷ್ಣನ ಲೀಲೆಗಳು ಮನುಷ್ಯನನ್ನು ಆನಂದ, ಸಂತೋಷದಿಂದ ಜೀವಿಸುವಂತೆ ಮಾಡುತ್ತವೆ. ಕೀರ್ತನೆಗಳು ಮನಸ್ಸಿನ ಗೊಂದಲಗಳನ್ನು ನಿವಾರಿಸಿ, ವಿವೇಕಯುತ ವರ್ತನೆಯಿಂದ, ಸನ್ಮಾರ್ಗದಲ್ಲಿ ಬದುಕಲು ಅವಕಾಶ ನೀಡುತ್ತವೆ ಎಂದರು. ಸ್ಪರ್ಧೆಯಲ್ಲಿ 10ಕ್ಕೂ ಹೆಚ್ಚು ತಂಡಗಳ ನೂರಾರು ಯುವಕರು ಪಾಲ್ಗೊಂಡಿದ್ದರು. ಯುವತಿಯರು, ಚಿಣ್ಣರು ಸೇರಿದಂತೆ ಸಾರ್ವಜನಿಕರು ಮೊಸರು ಮಡಿಕೆ ಒಡೆಯುವ ಉತ್ಸವದಲ್ಲಿ ಪಾಲ್ಗೊಂಡು ಹರ್ಷಿತರಾದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿ.ಕೆ. ರಮಕ್ಕ, ಸಾರಿಗೆ ಇಲಾಖೆ ಆಯುಕ್ತ ಕೆ. ಅಮರನಾರಾಯಣ, ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್, ಬಿವಿಎಸ್ ಪ್ರತಿಷ್ಠಾನ ವೆಂಕಟನಾಗಪ್ಪ ಶೆಟ್ಟಿ, ರೋಟರಿ ಸಂಸ್ಥೆಯ ಶಾಂತಿ ಪ್ರಸಾದ್, ಉದ್ಯಮಿ ಕೆ.ಬಿ. ಗಣಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.