ADVERTISEMENT

ಉಪ್ಪಾರ ಮೂಲಪೀಠದ ಜೀರ್ಣೋದ್ಧಾರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 6:38 IST
Last Updated 3 ಮಾರ್ಚ್ 2014, 6:38 IST

ಚಾಮರಾಜನಗರ: ‘ಉಪ್ಪಾರ ಸಮಾಜದ ಮೂಲಮಠ ಮತ್ತು ದೇವರಗುಡ್ಡಪ್ಪ ಅವರ ಗದ್ದಿಗೆ ಶಿಥಿಲಗೊಂಡಿದ್ದು, ಜೀರ್ಣೋದ್ಧಾರ ಮಾಡಬೇಕಿದೆ. ದೇವರಗುಡ್ಡಪ್ಪ ಅವರ ವಂಶಸ್ಥರು 2 ಎಕರೆ ಜಮೀನನ್ನು ಮಠದ ನಿರ್ಮಾಣಕ್ಕೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಮುಖಂಡ ಮಂಗಲ ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಉಪ್ಪಾರ ಮೂಲ ಪೀಠದ ಜೀರ್ಣೋದ್ಧಾರಕ್ಕೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಈಚೆಗೆ ನಡೆದ ಉಪ್ಪಾರ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಯ ಮೇಲು ಸಕ್ಕರೆ ಉಪ್ಪಾರರ 88 ಗಡಿ ಗ್ರಾಮಸ್ಥರು ಈ ಪೀಠದ ವ್ಯಾಪ್ತಿಗೆ ಬರುತ್ತಾರೆ. ದೇವರಗುಡ್ಡಪ್ಪ ಸ್ವಾಮೀಜಿ ಅವರು 300 ವರ್ಷದ ಹಿಂದೆಯೇ ಮಂಗಲ ಗ್ರಾಮದಲ್ಲಿ ಹಲವು ಧಾರ್ಮಿಕ ಕಾರ್ಯ ಕೈಗೊಂಡು ಉಪ್ಪಾರ ಪೀಠ ಸ್ಥಾಪಿಸಿದ್ದರು ಎಂದರು.

ಮಂಗಲದ ಬೆಟ್ಟದ ಮೇಲಿನ ಶ್ರೀಶಂಕರೇಶ್ವರ ದೇವಾಲಯ, ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಟಪ ಹಾಗೂ ಚಿಲಕವಾಡಿ, ಮುಡುಕುತೊರೆ, ಬಿಳಿಗಿರಿರಂಗನಬೆಟ್ಟ ಸೇರಿದಂತೆ ವಿವಿಧೆಡೆ ಕಲ್ಯಾಣ ಮಂಟಪ ಸ್ಥಾಪಿಸಿ ಹಲವು ಪವಾಡ ಸೃಷ್ಟಿಸಿದ್ದಾರೆ ಎಂದು ಹೇಳಿದರು.

88 ಗಡಿಮನೆ, ಕಟ್ಟೆಮನೆ ಸ್ಥಾಪಿಸಿ ಅವುಗಳಿಗೆ  ತಮ್ಮದೆಯಾದ ನೀತಿ ರೂಪಿಸಿದ್ದಾರೆ. ಆ ಮೂಲಕ ಉಪ್ಪಾರ ಸಮುದಾಯದ ಒಗ್ಗಟ್ಟಿಗೆ ಮುನ್ನುಡಿ ಬರೆದಿದ್ದಾರೆ ಎಂದರು.

ಮೂರು ಜಿಲ್ಲೆಯ ಗಡಿಮನೆ, ಕಟ್ಟೆಮನೆ ಯಜಮಾನರ ಸಮ್ಮುಖದಲ್ಲಿ ಶೀಘ್ರವೇ ಉಪ್ಪಾರ ಮೂಲ ಪೀಠದ ಜೀರ್ಣೋದ್ಧಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ದೇವರಗುಡ್ಡಪ್ಪ ಮೂಲ ಪೀಠದ ಅಭಿವೃದ್ಧಿ ಸಮಿತಿ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಮಂಗಲ ಶಿವಕುಮಾರ್ ಆಯ್ಕೆಯಾದರು.

ಸಭೆಯಲ್ಲಿ ಮುಖಂಡರಾದ ರಂಗಸ್ವಾಮಿ, ಪುಟ್ಟಸ್ವಾಮಿ, ಮಾರಶೆಟ್ಟಿ, ಎಂ.ಕೆ. ನಾಗರಾಜು, ಮಹದೇವಶೆಟ್ಟಿ, ಕಾಂತರಾಜು, ಚೆಲುವರಾಜು, ಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.