ADVERTISEMENT

ಎಪಿಎಲ್ ಕಾರ್ಡ್‌ಗೆ ಸೀಮೆಎಣ್ಣೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:30 IST
Last Updated 4 ಸೆಪ್ಟೆಂಬರ್ 2013, 6:30 IST

ಚಾಮರಾಜನಗರ: ತಾಲ್ಲೂಕಿನಲ್ಲಿ ಎಪಿಎಲ್ ಪಡಿತರದಾರರಿಗೆ ಸೆಪ್ಟೆಂಬರ್ ತಿಂಗಳಿನಿಂದ ಅನ್ವಯವಾಗುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರ ಇಲಾಖೆಗಳ ಆಯುಕ್ತರ ಸುತ್ತೋಲೆ ಅನ್ವಯ ಸೀಮೆಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ನಗರಸಭೆ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯ ಎಪಿಎಲ್ ಅನಿಲಸಹಿತ ಕಾರ್ಡ್‌ಗಳಿಗೆ ಸೀಮೆಎಣ್ಣೆ ವಿತರಣೆ ಇರುವುದಿಲ್ಲ. ತಾಲ್ಲೂಕಿನ ಗ್ರಾಮಾಂತರ ಎಪಿಎಲ್ ಅನಿಲರಹಿತ ಪಡಿತರ ಚೀಟಿಗಳಿಗೆ ಸೆಪ್ಟೆಂಬರ್‌ನಿಂದ ತಲಾ 3 ಲೀಟರ್ ಸೀಮೆಎಣ್ಣೆ ವಿತರಿಸಲಾಗುವುದು. ಮುಂದಿನ ಎರಡು ತಿಂಗಳಲ್ಲಿ ಗ್ರಾಮಾಂತರ ಅನಿಲರಹಿತ ಪಡಿತರ ಚೀಟಿಗಳಿಗೆ ಹಂತ ಹಂತವಾಗಿ ಸೀಮೆಎಣ್ಣೆ ಹಂಚಿಕೆ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಎಪಿಎಲ್ ಅನಿಲರಹಿತ ಪಡಿತರ ಚೀಟಿದಾರರು ಸಂಬಂಧಿಸಿದ ವ್ಯಾಪ್ತಿಯ ಪ್ರದೇಶದ ಅಡುಗೆ ಅನಿಲ ವಿತರಕರನ್ನು ಸಂಪರ್ಕಿಸಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಒಂದು ಮತ್ತು ಎರಡು ಸದಸ್ಯರು ಇರುವ ಅಂತ್ಯೋದಯ ಅನ್ನ ಯೋಜನೆ, ಬಿಪಿಎಲ್ ಅನಿಲರಹಿತ ಪಡಿತರ ಚೀಟಿಗೆ ತಲಾ 3 ಲೀಟರ್‌ನಂತೆ ಸೀಮೆಎಣ್ಣೆ ವಿತರಿಸಲಾಗುತ್ತದೆ. ಸೆಪ್ಟೆಂಬರ್ ತಿಂಗಳಿನಿಂದ ಅನ್ವಯಿಸುವಂತೆ ಪಡಿತರ ಚೀಟಿಗಳಿಗೆ ಸೀಮೆಎಣ್ಣೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.