ADVERTISEMENT

ಏ.1ಕ್ಕೆ ನಾಗರಿಕ ಸೇವಾ ಖಾತ್ರಿ ಕಾಯ್ದೆ ಜಾರಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 8:45 IST
Last Updated 22 ಮಾರ್ಚ್ 2012, 8:45 IST

ಚಾಮರಾಜನಗರ: `ಜಿಲ್ಲೆಯಲ್ಲಿ ಕರ್ನಾಟಕ ನಾಗರಿಕ ಸೇವೆಗಳ ಖಾತ್ರಿ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು~ ಎಂದು ಜಿಲ್ಲಾಧಿಕಾರಿ ಕೆ.ಆರ್. ಸುಂದರ್ ಹೇಳಿದರು.

ನಗರದ ಜಿ.ಪಂ. ಕೆಡಿಪಿ ಸಭಾಂಗಣದಲ್ಲಿ ಬುಧವಾರ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾಡಳಿತ ಹಾಗೂ ಜಿಲ್ಲಾ  ಪಂಚಾಯಿತಿಯಿಂದ ಅಧಿಕಾರಿಗಳಿಗೆ ಕರ್ನಾಟಕ ನಾಗರಿಕ ಸೇವೆಗಳ ಖಾತ್ರಿ ಕಾಯ್ದೆ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದಿಂದ ದೊರೆಯುವ ಸೌಲಭ್ಯ, ಪ್ರಮಾಣಪತ್ರಗಳು ಎಷ್ಟು ಅವಧಿಯೊಳಗೆ ನೀಡಬೇಕು ಎಂಬ ಬಗ್ಗೆ ಸಾರ್ವಜನಿಕವಾಗಿ ಫಲಕ ಪ್ರದರ್ಶಿಸಲಾಗುತ್ತಿದೆ. ಈ ಕಾಯ್ದೆಯ ಅನುಷ್ಠಾನದಿಂದ ಕಾಲಮಿತಿಯೊಳಗೆ ಜನರಿಗೆ ಸೌಲಭ್ಯ ಪಡೆಯುವ ಹಕ್ಕು ದಕ್ಕಿದೆ. ಸೇವಾ ಸೌಲಭ್ಯ ವಿಳಂಬವಾದರೆ ಸಂಬಂಧಪಟ್ಟ ನೌಕರ, ಅಧಿಕಾರಿಯಿಂದ ಪ್ರತಿದಿನ ಪರಿಹಾರವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ ಎಂದರು.

ಈಗಾಗಲೇ, ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಕಾಯ್ದೆ ಜಾರಿಗೆ ಬಂದಿದೆ. ಚಾಮರಾಜನಗರ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಏ. 1ರಿಂದ ಕಾಯ್ದೆ ಅನುಷ್ಠಾನಕ್ಕೆ ಬರಲಿದೆ.  11 ಇಲಾಖೆಗಳ 151 ಸೇವೆಗಳು ಕಾಯ್ದೆಯ ವ್ಯಾಪ್ತಿಗೆ ಬರಲಿವೆ ಎಂದರು.

ಮೈಸೂರು ಎಸ್‌ಐಆರ್‌ಡಿ ನಿರ್ದೇಶಕ ಆಶ್ರಾಫ್ ಉಲ್ ಹಸನ್ ಮಾತನಾಡಿ, ಈಗಾಗಲೇ ಪ್ರಾಯೋಗಿಕವಾಗಿ ಕಾಯ್ದೆ  ಜಾರಿಯಲ್ಲಿರುವ ಜಿಲ್ಲೆಗಳ ನಾಲ್ಕು ತಾಲ್ಲೂಕಿನಲ್ಲಿ ನಿಗದಿತ ಅವಧಿಯೊಳಗೆ ಸೇವೆ ಸಲ್ಲಿಸದಿರುವ 682 ಅಧಿಕಾರಿಗಳಿಂದ ಪರಿಹಾರದ ವೆಚ್ಚ ವಸೂಲಿ ಮಾಡಲಾಗಿದೆ ಎಂದು ಹೇಳಿದರು.

ಜಿ.ಪಂ. ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎ.ಪಿ. ಶಂಕರರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಚ್. ಚಂದ್ರಶೇಖರ್, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಎಂ.ಆರ್. ಸೋಮಶೇಖರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.