ADVERTISEMENT

ಕಂದೇಗಾಲ: ಬಸ್ ಸೌಲಭ್ಯಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 6:57 IST
Last Updated 15 ಜುಲೈ 2013, 6:57 IST

ಗುಂಡ್ಲುಪೇಟೆ: ತಾಲ್ಲೂಕಿನ ಕಂದೇಗಾಲ ಗ್ರಾಮ ಸೇರಿದಂತೆ ಹಲವಾರು ಮಾರ್ಗಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಕಾವಲುಪಡೆ ತಾಲ್ಲೂಕು ಘಟಕದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸ್ ಘಟಕಕ್ಕೆ ಬೆಳಿಗ್ಗೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಗುರು ನೇತೃತ್ವದಲ್ಲಿ ಆಗಮಿಸಿದ ಕಾರ್ಯಕರ್ತರು, ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯ ಒದಗಿಸಬೇಕು, ಶುದ್ಧ ನೀರಿನ ಪೂರೈಕೆ, ಶೌಚಾಲಯ ನಿರ್ಮಾಣಕ್ಕೆ ಆಗ್ರಹಿಸಿದರು.

ಕಂದೇಗಾಲ ಗ್ರಾಮಕ್ಕೆ ಏಕೈಕ ಬಸ್ಸಿನ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ, ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಶಾಲೆಯ ವೇಳೆಗೆ ತಲುಪಲು ಅನುಕೂಲವಾಗಲು ಬಸ್ ಸೌಲಭ್ಯ ಒದಗಿಸಬೇಕು. ಕಂದೇಗಾಲ ಮಾರ್ಗ ಸೇರಿ ತಾಲ್ಲೂಕಿನ ಹಲವಾರು ಮಾರ್ಗಗಳಿಗೆ ಇಂತಹದ್ದೇ ಸಮಸ್ಯೆ ಇದೆ ಎಂದು ಮನವರಿಕೆ ಮಾಡಿಕೊಟ್ಟರು.

ಈ ಕುರಿತು ಗುಂಡ್ಲುಪೇಟೆ ಬಸ್ ಘಟಕದ ವ್ಯವಸ್ಥಾಪಕ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು. ಸಮಸ್ಯೆ ಬಗೆಹರಿಸುವ ಭರವಸೆ ನಂತರ ಪ್ರತಿಭಟನೆ ಕೈಬಿಡಲಾಯಿತು.

ಕರ್ನಾಟಕ ಕಾವಲು ಪಡೆ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಗುರು, ಗೌರವಾಧ್ಯಕ್ಷ ಮಣಿಸುಂದರ್, ಉಪಾಧ್ಯಕ್ಷ ನಲ್ಲಿಪ್ರಸಾದ್, ಫಾರೂಖ್ ಖಾನ್ ಹೊಂಗಳ್ಳಿ ಸಂತೋಷ್, ವಿಶ್ವನಾಥ, ಮಂಜುನಾಥ, ಜಬ್ಬಾರ್, ಮಾರುತಿ, ಶಫೀಕ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.