ಗುಂಡ್ಲುಪೇಟೆ: ಕಬಿನಿ 2ನೇ ಹಂತದ ನೀರಾವರಿ ಯೋಜನೆಯಿಂದ ತಾಲ್ಲೂಕಿನ 133 ಹಳ್ಳಿಗಳಿಗೆ ಹಾಗೂ ಚಾಮರಾಜನಗರದ 167 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ದೊರಕಲಿದೆ ಎಂದು ಶಾಸಕ ಎಚ್.ಎಸ್. ಮಹಾದೇವಪ್ರಸಾದ್ ಹೇಳಿದರು.
ತಾಲ್ಲೂಕಿನ ಪಡುಗೂರು ಗ್ರಾಮದಲ್ಲಿ ಸೋಮವಾರ ಆರ್‌ಐಡಿಎಚ್-15ರ ಯೋಜನೆಯಡಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಕೊಳವೆ ಬಾವಿ ಕೊರೆದರೂ ನೀರು ಬರುತ್ತಿಲ್ಲ, ಇದಕ್ಕೆ ಕಬಿನಿ ಕುಡಿಯುವ ನೀರಿನ ಯೋಜನೆಯಿಂದ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ ಎಂದರು.
ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಿಗೂ ಸ್ವಂತ ಕಟ್ಟಡಗಳಿವೆ. ಈ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯಿತಿ ಕಟ್ಟಡವನ್ನು ಆರ್‌ಐಡಿಎಚ್-15ರ ಯೋಜನೆಯಡಿ 16 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದರು.
ಈ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ನಿವೇಶನದಲ್ಲಿ ರಾಜೀವ್ ಗಾಂಧಿ ಸೇವಾ ಕೇಂದ್ರ ನಿರ್ಮಿಸಲಾಗುವುದು, ಇದರಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ವಿವಿಧ ತರಬೇತಿಗಳನ್ನು ನೀಡಲು ಸಹಕಾರಿಯಾಗಲಿದೆ ಎಂದರು. ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಕೊರತೆ ಇದೆ. ಆದರೆ ಸ್ಥಳೀಯವಾಗಿ ಲಭ್ಯವಾಗುವ ಆದಾಯವನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ನೇರವಾಗಿ ಅವರೇ ಪರಿಹರಿಸುವಂತಾಗಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಯನ್ನು 155 ರೂ. ಗೆ ಹೆಚ್ಚಿಸಲಾಗಿದೆ, ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳನ್ನು ಮಾಡಲು ಎಲ್ಲರೂ ಮುಂದಾಗಬೇಕು ಎಂದರು.
ನನ್ನ ಅನುದಾನದಿಂದ ಗುಂಡ್ಲುಪೇಟೆ ತಾಲ್ಲೂಕಿಗೆ ರೂ.1.50 ಕೋಟಿ ಬಿಡುಗಡೆ ಮಾಡಲಾಗಿದ್ದು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು. ರಾಜ್ಯ ಸರ್ಕಾರ ಬರ ನಿರ್ವಹಣೆಗಾಗಿ ಅಧ್ಯಯನ ತಂಡವನ್ನು ಕಳುಹಿಸಿದ್ದು ಈಗಾಗಲೇ ವರದಿ ಸಲ್ಲಿಸಲಾಗಿದೆ, ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪಡುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನ್ ಮಾತನಾಡಿ, ಪ್ರತಿ ಮನೆಯವರೂ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದರು.
ಶ್ಯಾನಾಡ್ರಹಳ್ಳಿ-ಮೂಡಗೂರು ರಸ್ತೆ ಕಾಮಗಾರಿ ಅನೇಕ ಬಾರಿ ನಡೆದಿದ್ದರೂ ಸಮರ್ಪಕವಾಗಿಲ್ಲ, ಗ್ರಾಮದ ಜನ ಓಡಾಡಲು ಬಹಳ ತೊಂದರೆಯಾಗಿದೆ ಎಂದು ದೂರಿದರು.
ತೆರಕಣಾಂಬಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಿ. ಮಹಾದೇವಪ್ಪ, ಬೇಗೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಸಿ. ನಾಗೇಂದ್ರ, ಮಾಜಿ ಸದಸ್ಯ ಕಬ್ಬಹಳ್ಳಿ ಮಹೇಶ್, ಮೂಡಗೂರು ಪಿ.ಎ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಪಿ. ಸುನಿಲ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟದೇವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯಿತ್ರಿ ನಾಗೇಶ್ ಮಾತನಾಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್. ರಾಜೇಶ್ವರಿ, ಸದಸ್ಯರಾದ ಮೃತ್ಯುಂಜಯ, ಪಿ.ಎಂ. ಬಸವರಾಜಸ್ವಾಮಿ, ಪಿ.ಎನ್. ಮಂಜುನಾಥ್, ಶ್ರೀಲಕ್ಷ್ಮಿ, ಆರ್. ಶಿವನಂಜಪ್ಪ, ಪಿ.ಎನ್. ಸ್ವಾಮಿ, ಬಸಮ್ಮ, ಚಂದ್ರಮ್ಮ, ಮಹೇಶ್, ಶಿವಯ್ಯ, ಆಶಾವತಿ, ಬಸವರಾಜಪ್ಪ, ದೇವೀರಮ್ಮ, ಕೆಂಪಮ್ಮ, ಕಬ್ಬಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಮಹಾದೇವಮ್ಮ, ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ದೇಶಕ ಮಹೇಶ್, ಮೂಡಗೂರು ಗ್ರಾಮದ ಗೌಡಿಕೆ ನಾಗೇಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಶಿವಪ್ರಸಾದ್, ಜಿ.ಪಂ. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಿಜಯಸಾರಥಿ, ಅಭಿವೃದ್ಧಿ ಅಧಿಕಾರಿ ಜಾನ್ ಗಿಲ್ಬರ್ಟ್ ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.