ADVERTISEMENT

ಕಾರ್ಖಾನೆ ಉಪ ಕಚೇರಿಗೆ ಬೀಗ ಜಡಿದ ರೈತರು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2011, 10:10 IST
Last Updated 4 ಆಗಸ್ಟ್ 2011, 10:10 IST
ಕಾರ್ಖಾನೆ ಉಪ ಕಚೇರಿಗೆ ಬೀಗ ಜಡಿದ ರೈತರು
ಕಾರ್ಖಾನೆ ಉಪ ಕಚೇರಿಗೆ ಬೀಗ ಜಡಿದ ರೈತರು   

ಚಾಮರಾಜನಗರ: ಇಳುವರಿ ಆಧಾರಿತ ಕಬ್ಬು ದರ ನೀಡದೆ ರೈತರಿಗೆ ವಂಚನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿರುವ ಬಣ್ಣಾರಿ ಅಮ್ಮನ್ ಮತ್ತು ಮಹದೇಶ್ವರ ಸಕ್ಕರೆ ಕಾರ್ಖಾನೆಯ ಉಪ ಕಚೇರಿಗಳಿಗೆ ಬುಧವಾರ ಬೀಗ ಜಡಿದು ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟಿಸಿದರು.

ಕಚೇರಿಗಳಿಗೆ ಬೀಗ ಜಡಿದ ಪ್ರತಿಭಟನಾಕಾರರು ಕಾರ್ಖಾನೆಯ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು. ಮಂಡ್ಯ ಮತ್ತು ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಗಡಿ ಜಿಲ್ಲೆಯಲ್ಲಿ ಬೆಳೆ ಯುವ ಕಬ್ಬಿನ ಇಳುವರಿ ಪ್ರಮಾಣ ಹೆಚ್ಚಿದೆ. ಆದರೆ, ಸೂಕ್ತ ಬೆಲೆ ನೀಡುತ್ತಿಲ್ಲ. ಬೆಳೆಗಾರರಿಗೆ ವಂಚನೆ ಮಾಡಲಾಗುತ್ತಿದೆ ಎಂದು ದೂರಿದರು.

ಪ್ರತಿ ಟನ್ ಕಬ್ಬಿಗೆ 2,500 ರೂ ದರ ನಿಗದಿಪಡಿಸಬೇಕು. ಬೆಲೆ ನಿಗದಿಪಡಿ ಸುವವರೆಗೂ ಕಾರ್ಖಾನೆಯನ್ನು ಪ್ರಾರಂ ಭಿಸಬಾರದು. ರೈತರಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಅಲ್ಲಿ ವರೆಗೂ ಹೋರಾಟ ಮುಂದುವರಿಯಲಿದೆ ಎಂದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ನಡೆದ ಸಭೆಯಲ್ಲಿ ಇಳುವರಿ ಆಧಾರಿತ ಬೆಲೆ ನೀಡುವುದಾಗಿ ಆಡಳಿತ ಮಂಡಳಿಗಳು ಒಪ್ಪಿವೆ. ಆದರೂ, ದರ ನಿಗದಿಪಡಿಸುವಲ್ಲಿ ಹಿಂದೇಟು ಹಾಕಲಾ ಗುತ್ತಿದೆ. ಕಬ್ಬು ಬೆಳೆಗಾರರು ಮತ್ತು ಆಡಳಿತ ಮಂಡಳಿಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಧಿಕಾರಿ ಕೂಡ ನಿರ್ಲಕ್ಷ್ಯವಹಿಸಿದ್ದಾರೆ. ಕೂಡಲೇ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.

ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಂಚಾಲಕ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಶ್ರೀಕಂಠಸ್ವಾಮಿ, ಮಹದೇವಸ್ವಾಮಿ, ಪುಟ್ಟಸ್ವಾಮಿ, ಕಾವುದವಾಡಿ ಶ್ರೀಕಂಠ ಮೂರ್ತಿ, ಆಲೂರು ಸಿದ್ದರಾಜು, ಶಾಂತರಾಜ್, ನಟರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಗುಂಡ್ಲುಪೇಟೆ ವರದಿ: ಕಬ್ಬಿಗೆ ವೈಜ್ಞಾ ನಿಕ ಬೆಲೆ ನೀಡುವ ವರೆಗೆ ಹೋರಾಟ ಮುಂದುವರೆಸಲಾಗುತ್ತದೆ ಎಂದು ತಾಲ್ಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಚೌಡಹಳ್ಳಿ ನಾಗರಾಜು ಬುಧವಾರ ಹೇಳಿದರು.

ಪಟ್ಟಣದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ವಿಭಾಗೀಯ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ನಂತರ ಮಾತನಾಡಿ ಅವರು, ಕಳೆದ ಸಾಲಿನ ಬಾಕಿ ಪ್ರತಿ ಟನ್‌ಗೆ ರೂ. 100 ಕೊಡಬೇಕಿದೆ. 11-12ನೇ ಸಾಲಿಗೆ ಕಬ್ಬಿನ ಬೆಲೆಯನ್ನು ಈಗಾಗಲೆ ನಿಗದಿ ಪಡಿಸಿರುವ ರೂ. 1,900ರ ಬದಲು 2,500 ಕೊಡಬೇಕು. ಸಾಗಣೆ ವೆಚ್ಚ ಹಾಗೂ ಕಬ್ಬು ಕಟಾವು ಬೆಲೆ ಹೆಚ್ಚಾಗಿ ರುವುದರಿಂದ ಹೆಚ್ಚಿನ ಬೆಲೆ ನೀಡಿದರೆ ಮಾತ್ರ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಸಾಧ್ಯವಾ ಗುತ್ತದೆ ಎಂದರು. ಆಗಸ್ಟ್ 10ರೊಳಗೆ ಬೆಳೆಗಾರರ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿ ಸಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನ ತೆರಕಣಾಂಬಿ ಹಾಗೂ ಬೇಗೂರು ವಿಭಾಗೀಯ ಕಚೇರಿಗೂ ಬೀಗ ಜಡಿಯಲಾಯಿತು.

ರೈತರಾದ ಎಸ್.ಎನ್. ಶಿವಮೂರ್ತಿ, ನಾಗರಾಜು, ಶಿವಪುರ ಸಿದ್ದಪ್ಪ, ಜಗದೀಶ್, ರೇವಣ್ಣ, ಬೊಮ್ಮಲಾಪುರ ಮಹಾದೇವಸ್ವಾಮಿ, ಕುಂದಕೆರೆ ನಾಗ ಮಲ್ಲಪ್ಪ, ಸಂಪತ್ತು, ಅಂಕಹಳ್ಳಿ ಉಮೇಶ್, ಯರಿಯೂರು ಲೋಕೇಶ್ ವಿವಿಧ ಗ್ರಾಮಗಳ ಬೆಳೆಗಾರರು ಇದ್ದರು.

ಯಳಂದೂರು ವರದಿ: ಬಣ್ಣಾರಿ ಅಮ್ಮನ್ ಷುಗರ್ಸ್‌ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿರುವ ರೈತರಿಗೆ ನ್ಯಾಯ ಸಮ್ಮತ ದರ ನೀಡುವಲ್ಲಿ ಕಾರ್ಖಾನೆಗಳು ವಿಫಲವಾಗಿವೆ ಎಂದು ಆರೋಪಿಸಿ ಬುಧವಾರ ಕಬ್ಬು ಬೆಳೆಗಾರರ ಸಂಘ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಭಾಗದ ಕಬ್ಬಿನಿಂದ ಶೇ.11ರಷ್ಟು ಸಕ್ಕರೆಯ ಇಳುವರಿ ಬರುತ್ತಿದೆ. ಇದರ ಉಪ ಉತ್ಪನ್ನಗಳಿಂದಲೂ ಹೆಚ್ಚು ಲಾಭ ಇದೆ. ಹೀಗಿದ್ದರೂ ನ್ಯಾಯಸಮ್ಮತ ದರ ದೊರಕುತ್ತಿಲ್ಲ. ಕಳೆದ ವರ್ಷ ಕಬ್ಬು ಬೆಳೆಯಲು ಕಾರ್ಖಾನೆಯ ಅಧಿಕಾರಿಗಳೇ ಬಿತ್ತನೆ ಬೀಜ ನೀಡಿ ಪ್ರೋತ್ಸಾಹ ಧನವನ್ನು ನೀಡುತ್ತೇವೆ ಎಂದು ಹೇಳಿ ಈಗ ವಂಚಿಸುತ್ತಿದ್ದಾರೆ. ಪಟ್ಟಣದಲ್ಲಿ ರುವ ಈ ಕಾರ್ಖಾನೆಗಳ ಕಚೇರಿ ಸೇರಿದಂತೆ ಮದ್ದೂರಿನ ಉಪ ಕಚೇರಿಗೂ ಬೀಗ ಜಡಿದು ಕಾರ್ಖಾನೆಗಳ ವಿರುದ್ಧ ಘೋಷಣೆ  ಕೂಗಿದರು.

ಸಂಘದ ಅಧ್ಯಕ್ಷ ನಾಗೇಂದ್ರ, ಬಿ.ಪಿ. ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಮೂರ್ತಿ, ಗೌಡಹಳ್ಳಿ ಪುಟ್ಟಸುಬ್ಬಪ್ಪ, ಚಿಕ್ಕಮಾದಯ್ಯ, ಮಹೇಶ್, ಜಯಣ್ಣ, ಬಸವಣ್ಣ, ಗುರುಸ್ವಾಮಪ್ಪ, ನಿಸಾರ್, ಮಹದೇವಪ್ಪ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.