ADVERTISEMENT

ಕಾಲುವೆ ಮಣ್ಣು ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 6:00 IST
Last Updated 12 ಅಕ್ಟೋಬರ್ 2012, 6:00 IST

ಕೊಳ್ಳೇಗಾಲ: ಕೆರೆ ಏರಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಮಣ್ಣು ಕುಸಿದು ಮುಚ್ಚಿ ಹೋಗಿರುವ ಕಾಲುವೆ ಮಣ್ಣನ್ನು ಕೂಡಲೇ ತೆಗೆಸುವಂತೆ ಒತ್ತಾಯಿಸಿ ಗುರುವಾರ ಸಿದ್ದಯ್ಯನಪುರ ಮತ್ತು ಕೊಳ್ಳೇಗಾಲ ವ್ಯಾಪ್ತಿ ರೈತರು ಕಬಿನಿ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.

ಕೊಳ್ಳೇಗಾಲ-ಮಧುವನಹಳ್ಳಿ ದೊಡ್ಡರಂಗನಾಥ ಮತ್ತು ಚಿಕ್ಕರಂಗನಾಥ ಕೆರೆ ಏರಿ ಅಗಲೀಕರಣ ಕಾಮಗಾರಿ ಯಲ್ಲಿ ಸಮರ್ಪಕ ರೀತಿಯಲ್ಲಿ ಮಣ್ಣು ಹಾಕದ ಕಾರಣ, ಕಳೆದ ಕೆಲವು ದಿನಗಳ ಹಿಂದೆ ಬಿದ್ದ ಮಳೆಯಿಂದ ರಸ್ತೆ  ಮಣ್ಣು ಕುಸಿದು ರೈತರ ಜಮೀನಿಗೆ ನೀರು ಪೂರೈಸುವ ಚಾನಲ್‌ಗಳು ಮತ್ತು ತೂಬು ಮುಚ್ಚಿ ಹೋಗಿವೆ. ಇದರಿಂದ ನೂರಾರು ಎಕರೆ ಬತ್ತದ ಬೆಳೆ ಒಣಗುತ್ತಿವೆ. ಆದ್ದರಿಂದ ತಕ್ಷಣವೇ ಚಾನಲ್ ಹೂಳನ್ನು ತೆಗೆಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.

ಕಬಿನಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವೆಂಕಟಾಚಲಯ್ಯ ಮಾತನಾಡಿ, ಇದು ರಾಷ್ಟ್ರೀಯ    ಹೆದ್ದಾರಿಗೆ ಸೇರ್ಪಡೆಯಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಲು ಸಲಹೆ ನೀಡಿದರು. ಅವರೇ ಖುದ್ದಾಗಿ ದೂರವಾಣಿ ಮೂಲಕ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ರವಿಶಂಕರ್ ಅವರನ್ನು ಸಂಪರ್ಕಿಸಿ ರೈತರ ಸಮಸ್ಯೆಯನ್ನು ಗಮನಕ್ಕೆ ತಂದರು.

ಕೆರೆ ಏರಿ ಮೇಲೆ ಭಾರಿ ವಾಹನಗಳು ಸಂಚರಿಸುತ್ತಿದ್ದು, ಅವಘಡ ಉಂಟಾಗುವ ಸಾಧ್ಯತೆ ಇದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇಲ್ಲಿಗೆ ಬಂದು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಾಜು, ಬಸವಣ್ಣ ಇತರರು ಎಚ್ಚರಿಸಿದ್ದಾರೆ.

ಎಇಇ ಮಂಜುನಾಥ್, ಜೆ.ಇ ರಾಮಕೃಷ್ಣ, ರೈತರಾದ ಮಾದೇಗೌಡ, ನಂಜಯ್ಯ, ಮೂರ್ತಿ, ಸ್ವಾಮಿ, ಪ್ರಕಾಶ್,ಬಸವರಾಜ್, ಶ್ರೀಕಂಠಸ್ವಾಮಿ, ರಾಮೇಗೌಡ, ಗೋವಿಂದ ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.