ADVERTISEMENT

ಕಾವೇರಿದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:10 IST
Last Updated 9 ಅಕ್ಟೋಬರ್ 2012, 9:10 IST
ಕಾವೇರಿದ ಪ್ರತಿಭಟನೆ
ಕಾವೇರಿದ ಪ್ರತಿಭಟನೆ   

ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಜಿಲ್ಲೆಯಾದ್ಯಂತ ವಿವಿಧ ಸಂಘ-ಸಂಸ್ಥೆಗಳಿಂದ ಪ್ರತಿಭಟನೆಗಳು ನಡೆದವು.

ನಗರದಲ್ಲಿ ಜೆ.ಡಿ.ಎಸ್. ತಾಲ್ಲೂಕು ಘಟಕದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಪ್ರತಿಭಟನೆ ಹೊರಟ ಪ್ರತಿಭಟನಕಾರರು ರಸ್ತೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಭುವನೇಶ್ವರಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಜೆ.ಡಿ.ಎಸ್.ತಾಲ್ಲೂಕು ಅಧ್ಯಕ್ಷ ಮಂಗಲ ಶಿವಕುಮಾರ್ ಮಾತನಾಡಿ, ಜಲಾಶಯಗಳಲ್ಲಿ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲದೆ ಅಧಿಕಾರಕ್ಕಾಗಿ ಅಂಟುಕೊಂಡಿದ್ದಾರೆ ಎಂದ ಅವರು ರಾಜ್ಯದ ಸಂಸದರೂ ಕೂಡ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ದೂರಿದರು.

ಇಮ್ತಿಯಾದ್ ಸೈಯ್ಯದ್ ಇದ್ರೀಶ್, ಶ್ರೀನಿವಾಸಪ್ರಸಾದ್, ಉಷಾ, ಗುರುಮೂರ್ತಿ, ನಾಗರಾಜಪ್ಪ, ಶೋಯೆಬ್, ಸೈಯದ್ ಇಸ್ರಾರ್, ನಯೀಮುಲ್ಲಾ, ಸಿ.ಎಂ.ಕೃಷ್ಣಮೂರ್ತಿ, ಸಾಧಿಕ್‌ಪಾಷಾ, ನಾಗೇಶ್, ನಾಗರಾಜು, ಭಾಗವಹಿಸಿದ್ದರು.

ಕಾವಲುಪಡೆಯಿಂದ ಎಮ್ಮೆ ಚಳವಳಿ
ತಮಿಳುನಾಡಿಗೆ ಕಾವೇರಿ ನೀರನ್ನು ಬಿಟ್ಟಿರುವುದನ್ನು ವಿರೋಧಿಸಿ ಕರ್ನಾಟಕ ಕಾವಲುಪಡೆ ವತಿಯಿಂದ ಎಮ್ಮೆಗಳ ಚಳವಳಿ ಸೋಮವಾರ ನಡೆಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನೆ ಹೊರಟ ಪ್ರತಿಭಟನಾಕಾರರು ತಮಿಳುನಾಡು ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿದರು.

ಕಾವಲು ಪಡೆಯ ಕಾರ್ಯಕರ್ತ ಸೀಮೆಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದಾಗ, ಪೊಲೀಸರು ಮಧ್ಯ ಪ್ರವೇಶಿಸಿ ತಡೆದರು. ನಂತರ ಸಂಘದ ಅಧ್ಯಕ್ಷ ಆರ್.ನಾರಾಯಣ್ ಪರಶಿವಮೂರ್ತಿ ಮತ್ತು ರಘು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಅರುಣ್‌ಕುಮಾರ್ ಗೌಡ, ಮಹದೇವಶೆಟ್ಟಿ, ಮೋಹನ್‌ಕುಮಾರ್, ಸಿದ್ದರಾಜು, ಮೂರ್ತಿ, ಕುಮಾರ, ಗುರು, ಲಕ್ಷ್ಮಣ ನಾಯಕ, ಗೋಪಿ, ಮರುಗೇಶ್, ಮಂಜು, ಸೋಮು, ಮಣಿ, ಆನಂದ್ ಭಾಗವಹಿಸಿದ್ದರು.

`ಕುರ್ಚಿಗಾಗಿ ರಾಜ್ಯದ ರೈತರ ಹಿತ ಬಲಿ~
ಕೊಳ್ಳೇಗಾಲ: ಕೇಂದ್ರದ ಪ್ರಧಾನಮಂತ್ರಿ ಮನಮೋಹನಸಿಂಗ್ ತಮ್ಮ ಕುರ್ಚಿ ಉಳಿವಿಗಾಗಿ ಕರ್ನಾಟಕದ ಜನತೆಯ ಹಿತವನ್ನು ಬಲಿ ತೆಗೆದುಕೊಂಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಬಿನಿ-ಕಾವೇರಿ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪಟ್ಟಣದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮನಮೋಹನ್ ಸಿಂಗ್, ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಜಿ.ಎನ್.ನಂಜುಂಡಸ್ವಾಮಿ ಸೇರಿದಂತೆ ಇತರೆ ರಾಜಕೀಯ ಮುಖಂಡರ ಮುಖವಾಡ ಧರಿಸಿ, ನೂರಾರು ಎತ್ತಿನ ಗಾಡಿಗಳೊಡನೆ ಪಟ್ಟಣದಲ್ಲಿ ಕಾವೇರಿ ನೀರು ನಿಲ್ಲಿಸಿ, ಕರ್ನಾಟಕ ರಕ್ಷಿಸಲು ಕೂಡಲೇ ರಾಜೀನಾಮೆ ನೀಡುವಂತೆ ಮುಖಂಡರು ಒತ್ತಾಯಿಸಿದರು.

ಪಟ್ಟಣದ ಮುಖ್ಯ ರಸ್ತೆಗಳಲ್ಲಿ ನಡೆದ ಬೃಹತ್ ಮೆರವಣಿಗೆ ತಾಲ್ಲೂಕು ಕಚೇರಿಯಲ್ಲಿ ಸಮಾವೇಶಗೊಂಡು ತಹಶೀಲ್ದಾರ್ ಸುರೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡ ಅಣಗಳ್ಳಿ ಬಸವರಾಜು, ನಟರಾಜ್‌ಮಾಳಿಗೆ, ರಂಗಸ್ವಾಮಿ, ಮಹದೇವಪ್ಪ, ಷಣ್ಮುಖಸ್ವಾಮಿ ಇತರೆ ಮುಖಂಡರು ಪಾಲ್ಗೊಂಡಿದ್ದರು.

ಪತ್ರಕರ್ತರಿಂದ ಪ್ರತಿಭಟನಾ ಮೆರವಣಿಗೆ
ಕೊಳ್ಳೇಗಾಲ:  ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿ ತಾಲ್ಲೂಕು ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ತೆರಳಿದ ಪತ್ರಕರ್ತರು ಮುಖ್ಯ ರಸ್ತೆಯಲ್ಲಿ ಸಾಗಿ ಸ್ಟೇಟ್‌ಬ್ಯಾಂಕ್ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ನಂತರ ತಾಲ್ಲೂಕು ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ನಟರಾಜು, ಕಾರ್ಯದರ್ಶಿ ಎಸ್.ರಾಜಶೇಖರ್, ಟಿ.ಜಾನ್‌ಪೀಟರ್, ಎಸ್.ರಾಜು, ಗುರುಸ್ವಾಮಿ, ಬಸಂತ್‌ಮೋಟಾಯ್, ನಾಗೇಂದ್ರಸ್ವಾಮಿ, ರಾಜೇಶ್, ಸುರೇಶ್, ದೇವರಾಜ್‌ನಾಯ್ಡು, ಮರಿಸ್ವಾಮಿ, ಎಸ್.ನಟರಾಜು, ಸಿದ್ದರಾಜು, ಶಿವರಾಜು, ಶಿವಮಲ್ಲು ಇತರರು ಹಾಜರಿದ್ದರು.

`ಕರ್ನಾಟಕದ ರೈತರಿಗೆ ಅನ್ಯಾಯ~
ಕೊಳ್ಳೇಗಾಲ: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟು ಕರ್ನಾಟಕದ ರೈತರಿಗೆ ಬಿಜೆಪಿ ಸರ್ಕಾರ ಘೋರ ಅನ್ಯಾಯ ಎಸಗಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜ್ ಆರೋಪಿಸಿದರು.

ಪಟ್ಟಣದಲ್ಲಿ ಸೋಮವಾರ ಜಾತ್ಯತೀತ ಜನತಾದಳ ವತಿಯಿಂದ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಏರ್ಪಡಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.

ಪಟ್ಟಣದ ಹೊಸ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಜಾತ್ಯತೀತ ಜನತಾದಳ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಟೌನ್ ಅಧ್ಯಕ್ಷ ಕೃಷ್ಣಯ್ಯ, ತಾಲ್ಲೂಕು ಅಧ್ಯಕ್ಷ ಇಂದ್ರೇಶ್, ನಗರಸಬಾ ಸದಸ್ಯೆ ಚೌಡಮ್ಮ, ಚಂದ್ರು, ಮೂರ್ತಿ ಕೃಷ್ಣ, ವೀರಭದ್ರ, ಮಂಜುನಾಥ್, ರಮೇಶ್, ಜಿ. ಮಹಾದೇವಪ್ಪ, ನಾಗೇಂದ್ರ ಇತರರು ಇದ್ದರು.

`ಕಾವೇರಿಗಾಗಿ ಜೆಡಿಎಸ್‌ನಿಂದ ನಿರಂತರ ಹೋರಾಟ~

ಯಳಂದೂರು: `ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯದ ವಿರುದ್ಧ, ಅದು ಬಗೆಹರಿಯುವವರೆಗೂ ಜೆಡಿಎಸ್ ಪಕ್ಷ   ನಿರಂತವಾಗಿ ಹೋರಾಟ ನಡೆಸಲಿದೆ~ ಎಂದು ಮಾಜಿ ಶಾಸಕ ಎಸ್. ಬಾಲರಾಜ್ ತಿಳಿಸಿದರು.

ಅವರು ಪಟ್ಟಣದಲ್ಲಿ ಸೋಮವಾರ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಜೆಡಿಎಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಈಗಾಗಲೇ ಸಾಕಷ್ಟು ನೀರಿದೆ. ಅಲ್ಲಿ ಉತ್ತಮ ಮಳೆಯಾಗಿದ್ದು, ಮುಂದೆ ಮಳೆಯಾಗುವ ಲಕ್ಷಣಗಳೂ ಇವೆ. ಆದರೆ ನೀರಿನ ದಾಸ್ತಾನು ಇಟ್ಟುಕೊಂಡು ವಿದ್ಯುತ್ ಉತ್ಪಾದನೆಗಾಗಿ ನೀರು ಕೇಳುತ್ತಿರುವುದು ಕರ್ನಾಟಕದ ಜನತೆಯ ಹಕ್ಕನ್ನು ಕಸಿದುಕೊಂಡಂತಾಗಿದೆ.

ಈ ನಿಟ್ಟಿನಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ದಿಕ್ಕಾರ ಕೂಗಿ ಗಾಂಧಿ ಸರ್ಕಲ್‌ನಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಲಾಯಿತು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಶಿವನಾಗಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ತಾಲ್ಲೂಕು ಪಂಚಾಯಿತಿ ಸದಸ್ಯ ಡಿ. ವೆಂಕಟಾಚಲ, ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಸಿ. ಬಾಬು, ಸಿದ್ದಪ್ಪಸ್ವಾಮಿ, ಜೆಡಿಎಸ್ ಮುಖಂಡರಾದ ಸುರೇಖಾ, ಬಂಗಾರಸ್ವಾಮಿ, ಎ.ಎನ್. ನಾಗೇಂದ್ರ, ಚೈತ್ರಮಣಿ, ಶಬ್ಬೀರ್, ರಿಜ್ವಾನ್, ಸೋಮನಾಯಕ, ರಾಜಶೇಖರ್ ಇತರರು ಹಾಜರಿದ್ದರು.

 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.