ADVERTISEMENT

ಕೃಷಿಕ ಸಮಾಜ ಸಭೆ: ಅಧಿಕಾರಿಗಳಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 9:39 IST
Last Updated 5 ಸೆಪ್ಟೆಂಬರ್ 2013, 9:39 IST

ಗುಂಡ್ಲುಪೇಟೆ: ಅರ್ಜಿಗಳನ್ನು ಪರಿಗಣಿಸದೆ ಶಿಫಾರಸ್ಸು ಪತ್ರ ಆಧರಿಸಿ ಕೃಷಿ ಸೌಲಭ್ಯ ವಿತರಿಸಿದ ಅಧಿಕಾರಿಗಳನ್ನು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೊಡಸೋಗೆ ಮಧು ತರಾಟೆಗೆ ತೆಗೆದುಕೊಂಡರು.

ತಾಲ್ಲೂಕು ಕೃಷಿ ಇಲಾಖೆ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಕೃಷಿಕ ಸಮಾಜದ ಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೃಷಿಕ ಸಮಾಜದ ನಿರ್ದೇಶಕರಿಗೆ ಸಭೆಯ ಬಗ್ಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಎಂಬ ನಿರ್ದೇಶಕರೊಬ್ಬರ ಪ್ರಸ್ತಾಪ ಅಂಗೀಕರಿಸಿದ ಅವರು ಈ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸಲು ನಿರ್ದೇಶನ ನೀಡಿದರು. 3 ಸಭೆಗಳಿಂದಲೂ ಗೈರು ಹಾಜರಾಗುತ್ತಿರುವ ಸಹಕಾರ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೊಟೀಸ್ ನೀಡುವಂತೆ ಸೂಚಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಅಧಿಕಾರಿಯೊಬ್ಬರು ಸಭೆಯಲ್ಲಿ ತಪ್ಪು ಮಾಹಿತಿ ನೀಡಿದ ಬಗ್ಗೆ ಗಮನ ಸೆಳೆದರು.

ಪಶುಪಾಲನಾ ಇಲಾಖೆಯ ನಟರಾಜು ಮಾತನಾಡಿ, ಬರಗಿ ಫಾರಂನ ಗೋಶಾಲೆಯಲ್ಲಿ ಸಾಕಷ್ಟು ಮೇವು ಉಳಿದಿದ್ದು, ರೈತರು ಅದನ್ನು ಕೊಂಡೊಯ್ಯಲು ಬಾರದಿರುವ ಬಗ್ಗೆ ಸಭೆಗೆ ತಿಳಿಸಿದರು. ಸದ್ಯ 3 ತಿಂಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ. ರಾಷ್ಟ್ರೀಯ ಕೃಷಿ ಮಿಷನ್ ವತಿಯಿಂದ ಮೇವು ಕಟಾವು ಯಂತ್ರಗಳನ್ನು 21 ಜನರಿಗೆ ನೀಡಲಾಗಿದೆ. ಎಂದು ಸಭೆಗೆ ಮಾಹಿತಿ ನೀಡಿದರು.

ಜಲಾನಯನ ಇಲಾಖೆಯ ಸತೀಶ್ ಮಾತನಾಡಿ, 5 ವರ್ಷಗಳ ಅವಧಿಗೆ 590 ಕೃಷಿ ಹೊಂಡ ಮತ್ತು ಕಂದಕ ಬದುಗಳ ನಿರ್ಮಾಣದ ಗುರಿ ಹೊಂದಲಾಗಿದ್ದು, ನಿಯಮಗಳನ್ನು ಸಡಿಲಿಸಲು ಸರ್ಕಾರದ ಜೊತೆ ಪತ್ರ ವ್ಯವಹಾರ ನಡೆಸಬಹುದು ಎಂದರು.

ಎಪಿಎಂಸಿ ಅಧಿಕಾರಿ ಮಹೇಶ್ ಮಾತನಾಡಿ, ಬೇಗೂರಿನಲ್ಲಿ ಹತ್ತಿ ಮಾರುಕಟ್ಟೆ ಸ್ಥಾಪನೆಗೆ 25 ಎಕರೆ ಭೂಮಿಯ ಅವಶ್ಯಕತೆ ಇದ್ದು, ನಬಾರ್ಡ್ ವತಿಯಿಂದ ಈ ಯೋಜನೆ ಜಾರಿಗೊಳಿಸಲಾಗುವುದು ಎಂದರು.

ಕೃಷಿ ಅಧಿಕಾರಿ ಸೋಮಶೇಖರ್ ಮಾತನಾಡಿ, 50 ಸಾವಿರ ಹೇಕ್ಟೇರ್ ಪ್ರದೇಶದಲ್ಲಿ ಪೂರ್ವ ಮುಂಗಾರಿನಲ್ಲಿ ಬಿತ್ತನೆ ಗುರಿ ಹೊಂದಲಾಗಿದ್ದು, ಶೇ 90 ಗುರಿ ಸಾಧಿಸಲಾಗಿದೆ ಎಂದರು.

ಉಪಾಧ್ಯಕ್ಷ ಭಿಕ್ಷೇಶ್ ಪ್ರಸಾದ್, ನಿರ್ದೇಶಕರಾದ ಶಿವರುದ್ರಪ್ಪ, ನಾಗಮಲ್ಲಪ್ಪ, ಸಾಹುಕಾರ್ ಸುಬ್ಬಣ್ಣ, ಚನ್ನಬಸಪ್ಪ, ಜಯಂತಿ, ಗುರುಸ್ವಾಮಿ, ನಾಗೇಶ್, ಕೃಷಿ ಸಹಾಯಕ ನಿರ್ದೇಶಕ ಸೋಮಶೇಖರ್, ತಾಲ್ಲೂಕು ಮಟ್ಟದ ಹಲವಾರು ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.