ADVERTISEMENT

ಕೆರೆ ಕಬಳಿಕೆಗೆ ಯತ್ನ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 9:25 IST
Last Updated 13 ಫೆಬ್ರುವರಿ 2012, 9:25 IST

ಕೊಳ್ಳೇಗಾಲ: ಮುಂದಿನ ದಿನಗಳಲ್ಲಿ ತಲೆದೋರಬಹುದಾದ ನೀರಿನ ಬವಣೆ ಅರಿತು ಸರ್ಕಾರ ಜಲಸಂರಕ್ಷಣೆಗೆ ಕೋಟಿಗಟ್ಟಲೆ ಹಣ ವ್ಯಯಿಸುತ್ತಿದೆ. ಆದರೆ ಹಣದ ಬೆನ್ನತ್ತಿರುವ ಧನದಾಹಿಗಳು ಕೆರೆಯನ್ನೇ ಕಣ್ಮರೆ ಮಾಡಿ ಕಬಳಿಸಲು ಮುಂದಾಗಿರುವ ಘಟನೆ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.

ಪಟ್ಟಣದ ಶಿರಡಿ ಸಾಯಿಮಂದಿರ ಬಡಾವಣೆಯಲ್ಲಿರುವ ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆ ಸಮೀಪ ಸರ್ವೆ ನಂ.669ರಲ್ಲಿ 35 ಸೆಂಟ್ ವಿಸ್ತೀರ್ಣದಲ್ಲಿ ಗ್ರಾಮಠಾಣೆ ವ್ಯಾಪ್ತಿಯಲ್ಲಿ ಕೆರೆ ಇದೆ. ಈ ಬಡಾವಣೆ ಮೂಲಕವೇ ಪ್ರತಿನಿತ್ಯ ಪಟ್ಟಣದ ಅನೇಕ ಜನರು ವಾಯುವಿಹಾರಕ್ಕೆ ಹೋಗಿ ಬರುವುದು ವಾಡಿಕೆ.

ಪ್ರತಿನಿತ್ಯವೂ ವಾಯುವಿಹಾರಕ್ಕೆ ಹೋಗುವ ಸಂದರ್ಭದಲ್ಲಿ ಈ ಕೆರೆ ಮೂಲಕವೇ ಹಾದುಹೋಗುತ್ತಿದ್ದ ವಾಯುವಿಹಾರಿಗಳಿಗೆ ಶುಕ್ರವಾರ ಅಚ್ಚರಿ ಕಾದಿತ್ತು. ಹಿಂದಿನ ದಿನ ಇದ್ದ ಕೆರೆಯೇ ಕಣ್ಮರೆಯಾಗಿ ಅಲ್ಲಿ ಕೆರೆ ಇದ್ದ ಯಾವುದೇ ಕುರುಹು ಇಲ್ಲದೆ ಸಮತಟ್ಟಾದ ಭೂಮಿಕಂಡು ಬಂದಿದೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ವಿಚಾರ ಮುಟ್ಟಿಸಿದ್ದಾರೆ.

ಭೂಮಾಪನ ಇಲಾಖೆ ಸಿಬ್ಬಂದಿ ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿ ಗ್ರಾಮಠಾಣೆಯಲ್ಲಿ ಸರ್ವೇ ನಂ.669ರಲ್ಲಿ 35 ಸೆಂಟ್‌ನಲ್ಲಿ ಕೆರೆ ಇರುವುದು ಬೆಳಕಿಗೆ ಬಂದಿದೆ.

ಭರವಸೆ: ಕೆರೆಯನ್ನು ಮುಚ್ಚಿದ್ದೇ ಆದಲ್ಲಿ ಅದನ್ನು ತೆರವುಗೊಳಿಸುವ ಬಗ್ಗೆ ಕ್ರಮ ಜರುಗಿಸುವುದಾಗಿ ಉಪವಿಭಾಗಾಧಿಕಾರಿ ಎ.ಬಿ. ಬಸವರಾಜು ಅವರು  ಭರವಸೆ ನೀಡಿದ್ದಾರೆ.

ತಾಲ್ಲೂಕು ದಂಡಾಧಿಕಾರಿಗಳು ಅಕ್ರಮ ಕೆರೆ ಕಬಳಿಕೆಗೆ ಮುಂದಾಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಕೆರೆಯನ್ನು ಉಳಿಸುವ ಬಗ್ಗೆ ಕ್ರಮಕ್ಕೆ ಮುಂದಾಗಬೇಕು. ಮುಂದಿನ ಯುವ ಪೀಳಿಗೆ ಭವಿಷ್ಯದ ಬಗ್ಗೆ ಚಿಂತಿಸಿ ಇಂತಹ ಕಾರ್ಯಕ್ಕೆ ಯಾರೂ ಸಹ ಮುಂದಾಗಬಾರದು ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.