ADVERTISEMENT

ಕೊತ್ತಲವಾಡಿ: ಬೀದಿದೀಪ ಸೌಲಭ್ಯಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 9:35 IST
Last Updated 13 ಫೆಬ್ರುವರಿ 2012, 9:35 IST

ಚಾಮರಾಜನಗರ: ತಾಲ್ಲೂಕಿನ ಕೊತ್ತಲ ವಾಡಿ ಗ್ರಾಮದಲ್ಲಿ ಸೋಮವಾರ ಗ್ರಾಮದೇವತೆ ಶ್ರೀಪಾರ್ವತಿ ಮಾರಮ್ಮ ಜಾತ್ರಾ ಮಹೋತ್ಸವ ನಡೆಯಲಿದೆ.

ಮಹೋತ್ಸವದ ಅಂಗವಾಗಿ ಗ್ರಾಮದ ಎಲ್ಲ ಬೀದಿಗಳಿಗೂ 70 ಸಾವಿರ ರೂ ವೆಚ್ಚದಡಿ ಬೀದಿದೀಪದ ಸೌಲಭ್ಯ ಕಲ್ಪಿಸಲಾಗಿದ್ದು, ಶನಿವಾರ ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚಿನ ಅನುದಾನ ಇಲ್ಲ. ಇದನ್ನು ಅರಿತು ಸುಮಾರು 125ಕ್ಕೂ ಹೆಚ್ಚು ಬೀದಿ ದೀಪ ಖರೀದಿಸಿ  ಅಳವಡಿಸಲಾಗಿದೆ.

ಬೀದಿದೀಪ ಸೌಲಭ್ಯಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮಲ್ಲಿಕಾರ್ಜುನಪ್ಪ, ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಹಲವು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಸುವರ್ಣ ಗ್ರಾಮ ಯೋಜನೆಯೂ ಪ್ರಗತಿಯಲ್ಲಿದೆ. ರಸ್ತೆ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಸಮುದಾಯ ಭವನ, ಚರಂಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಮಾದರಿ ಗ್ರಾಮ ರೂಪಿಸಬೇಕು. ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ದೊಂದಿಗೆ ಯೋಜನೆಗಳನ್ನು ಜಾರಿ ಗೊಳಿಸಿ ಅಭಿವೃದ್ಧಿಪಡಿಸಬೇಕು. ಆಶ್ರಯ ಮನೆ ನಿರ್ಮಾಣ, ನಿವೇಶನ ಹಂಚಿಕೆ ಸೇರಿದಂತೆ ಅರ್ಹರಿಗೆ ಸೂರಿನ ಸೌಲಭ್ಯ ಕಲ್ಪಿಸಲಾಗುವುದು. ಗ್ರಾಮದೇವತೆ ಜಾತ್ರೆಯನ್ನು ಎಲ್ಲರೂ ಒಟ್ಟಾಗಿ ಆಚರಣೆ ಮಾಡಬೇಕು ಎಂದು ಸಲಹೆ ನೀಡಿದರು.

ತಾ.ಪಂ. ಸದಸ್ಯೆ ಕೆ.ಎಂ. ಗುರು ಮಲ್ಲಮ್ಮ, ಗ್ರಾ.ಪಂ. ಸದಸ್ಯರಾದ ಮಾದಪ್ಪ, ಕೆ.ಎಸ್. ಸೋಮಣ್ಣ, ನಟರಾಜ್, ಪ್ರಕಾಶ್, ನಾಗರತ್ನಮ್ಮ, ಎಂ.ಎನ್. ದೊಡ್ಡಮ್ಮ, ಮಹ ದೇವಮ್ಮ, ಚಿಕ್ಕಸಿದ್ದಯ್ಯ, ಮುಖಂಡ ರಾದ ಆರ್. ಗುರುಸ್ವಾಮಿ, ಕೊತ್ತಲ ವಾಡಿ ಕುಮಾರ್, ಸೋಮಯ್ಯ, ಮಹೇಶ್, ಮಹದೇವಸ್ವಾಮಿ, ನಿಂಗಪ್ಪ ಇತರರು ಹಾಜರಿದ್ದರು.

ನೀಲಗಾರರಿಗೆ ಸನ್ಮಾನ ಇಂದು
ಚಾಮರಾಜನಗರ: ನಗರದ ಉಪ್ಪಾರಬೀದಿಯ ಶ್ರೀಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಫೆ. 13ರಂದು ಸಂಜೆ 5ಗಂಟೆಗೆ ಶ್ರೀಮಂಟೇ ಸ್ವಾಮಿ ನೀಲಗಾರರ ಸಂಘದ ಉದ್ಘಾಟನೆ ಹಾಗೂ ನೀಲಗಾರರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳ ಲಾಗಿದೆ.

ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ ನೀಲಗಾರರ ಸಂಘ ಉದ್ಘಾಟಿಸಲಿದ್ದಾರೆ. ನಗರಸಭೆ ಸದಸ್ಯ ಶಿವನಂಜಯ್ಯ, ತಾ.ಪಂ. ಪ್ರಭಾರ ಅಧ್ಯಕ್ಷ ಪಿ. ಮಹಾಲಿಂಗಸ್ವಾಮಿ, ಸಿ.ಎ. ಮಹದೇವಶೆಟ್ಟಿ, ಸಿದ್ದರಾಜು, ಆರ್. ಕಾವೇರಿ, ಚಿಕ್ಕಮಹದೇವು, ಕಾಂತಾಮಣಿ, ಮೀನಾಕ್ಷಿ, ಜೈಕುಮಾರ್, ಲಿಂಗರಾಜು, ಮಲ್ಲು, ಶಿವಣ್ಣ ಹಾಗೂ ಸತ್ಯಪ್ಪ ಅತಿಥಿಗಳಾಗಿ ಭಾಗವಹಿಸ ಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.