ADVERTISEMENT

ಕೊಳ್ಳೇಗಾಲ ಕ್ಷೇತ್ರಕ್ಕೆ 14 ಸಾವಿರ ಮನೆ-ಶಾಸಕ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 10:00 IST
Last Updated 12 ಏಪ್ರಿಲ್ 2012, 10:00 IST

ಯಳಂದೂರು: `2011-12 ಹಾಗೂ 2012-13 ನೇ ಸಾಲಿನಲ್ಲಿ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ 14 ಸಾವಿರ ಮನೆ ಮಂಜೂರು ಆಗಿವೆ. ಇಡೀ ಚಾಮರಾಜನಗರ ಜಿಲ್ಲೆಯಲ್ಲೇ ಕ್ಷೇತ್ರವೊಂದಕ್ಕೆ ಹೆಚ್ಚು ಮನೆ ನೀಡಿದ್ದು ಬಿಜೆಪಿ ಸರ್ಕಾರದ ಸಾಧನೆ~ ಎಂದು ಶಾಸಕ ಜಿ.ಎನ್. ನಂಜುಂಡಸ್ವಾಮಿ ತಿಳಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇದರಲ್ಲಿ ಕಳೆದ ಸಾಲಿನಲ್ಲಿ 4 ಸಾವಿರ ಮನೆಗಳು ಹಾಗೂ ಈ ಸಾಲಿನಲ್ಲಿ 10 ಸಾವಿರ ಮನೆಗಳಲ್ಲಿ ಸಂತೆಮರಹಳ್ಳಿಗೆ 4200, ಯಳಂದೂರಿಗೆ 3700 ಹಾಗೂ ಕೊಳ್ಳೇಗಾಲಕ್ಕೆ 2200 ಮನೆಗಳು ಮಂಜೂರಾಗಿದೆ.
 
ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು, ಇಒ ಹಾಗೂ ಪಿಡಿಓ ನೇತೃತ್ವದಲ್ಲಿ ಈಗಾಗಲೇ ಫಲಾಭವಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಏಪ್ರಿಲ್ ಅಂತ್ಯದ ವೇಳೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ನೇತೃತ್ವದಲ್ಲಿ ಮನೆಗಳನ್ನು ಹಂಚಿಕೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಬರ ಪರಿಹಾರ ಯೋಜನೆಯಡಿಯಲ್ಲಿ ಶಾಸಕರ ಅನುದಾನಕ್ಕೆ ಪ್ರತಿ ಕ್ಷೇತ್ರಕ್ಕೆ 30 ಲಕ್ಷ ರೂ. ಮಂಜೂರಾಗಿದೆ. ಇದರಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ರಾಜ್ಯ ಸಚಿವರ ನಿಯೋಗವು ಜಿಲ್ಲಾದ್ಯಂತ ಪ್ರವಾಸ ಮಾಡಿದ್ದು, ಈಗಾಗಲೇ ಇಲ್ಲಿಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ.
 
ಇದಲ್ಲದೇ ಚಾಮರಾಜನಗರ ತಾಲ್ಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳಿಗೆ ನದಿ ಮೂಲದಿಂದ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗೆ ಸಚಿವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭ್ಯವಾಗಿದೆ. ಇದೇನಾದರೂ ಕಾರ್ಯರೂಪಕ್ಕೆ ಬಂದಲ್ಲಿ ಶೇ. 70 ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದರು.

ಜಿಲ್ಲಾ ಪಂಚಾಯಿತಿಯ ಪ್ರಭಾರ ಸಿಇಒ ಶಂಕರರಾಜು ಮಾತನಾಡಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿನ ಮಳೆ ಈ ಬಾರಿ ಕೈಕೊಟ್ಟಿದೆ. ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿಗೆ ಯಾವುದೇ ಕಾರಣಕ್ಕೂ ಅನುದಾನ ಇಲ್ಲ ಎಂದು ಹೇಳಲು ಸಾದ್ಯವಿಲ್ಲ.13 ನೇ ಹಣಕಾಸು ಆಯೋಗ ಜಿಲ್ಲೆಯ 120 ಗ್ರಾ.ಪಂ.ಗಳಿಗೆ ಅನುದಾನ ನೀಡಿದೆ. 32 ಕೋಟಿ ಯಲ್ಲಿ 26 ಕೋಟಿ ರೂ. ಖರ್ಚಾಗಿದೆ. ಈ ಸಾಲಿನಲ್ಲಿ 476 ಕೊಳವೆ ಬಾವಿ ಕೊರೆಯಿಸಲಾಗಿದೆ. ಇದರಲ್ಲಿ ಶೇ.27 ರಿಂದ 30 ರಷ್ಟು ಕೊಳವೆಬಾವಿಗಳಲ್ಲಿ 800 ಅಡಿ ವರೆಗೂ ಕೊರೆಯಿಸಿದ್ದರೂ ನೀರು ಬಂದಿಲ್ಲ.

ಘನತ್ಯಾಜ್ಯ ವಿಲೇವಾರಿಗೆ ಪ್ರತಿ ಗ್ರಾ.ಪಂ.ಗೂ ವಿಶೇಷ ಆದ್ಯತೆ ನೀಡಲಾಗಿದೆ. ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬಯಲು ಮಲ ವಿಸರ್ಜನೆಯ ಅಪಾಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳೂ ನಡೆಯುತ್ತಿವೆ. ಪ್ರತಿ ವಾರ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಇಒ ಹಾಗೂ ಪಿಡಿಓ ಗಳು ವಾರಕ್ಕೊಮ್ಮೆ ಕುಡಿಯುವ ನೀರಿನ ಬಗ್ಗೆ ಸಭೆ ಸೇರಿ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. ಅಂತರ್ಜಲ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು ಎಂದರು.

ಜಿ.ಪಂ. ಸದಸ್ಯ ಸಿದ್ಧರಾಜು, ತಾ.ಪಂ. ಸದಸ್ಯ ಕೆ.ಪಿ. ಶಿವಣ್ಣ, ಕೊಳ್ಳೇಗಾಲ ಇಒ ಮಹಾದೇವಸ್ವಾಮಿ, ಯಳಂದೂರು ಇಒ ಚಿಕ್ಕಲಿಂಗಯ್ಯ, ಚಾ.ನಗರ ಇಒ ಜೈಕೃಷ್ಣ ಇತರರು ಇದ್ದಾರೆ.

ಶಶಿಧರ್‌ಗೆ ವೈಲ್ಡ್ ಲೈಫ್ ಪ್ರಶಸ್ತಿ ಪ್ರದಾನ
ಗುಂಡ್ಲುಪೇಟೆ: ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟದ ವಲಯ ಅರಣ್ಯಾಧಿಕಾರಿ ಶಶಿಧರ್ ಹಾಗೂ ಹೆಡಿಯಾಲ ವಲಯ ಅರಣ್ಯಾಧಿಕಾರಿ ಸಂಗಮೇಶ್ ಪ್ರಭಾಕರ್ ರವರಿಗೆ 2011-12ನೇ ಸಾಲಿನ ಜಂಬೋ ವೈಲ್ಡ್ ಲೈಫ್ ಪ್ರಶಸ್ತಿಯನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ವಿತರಿಸಲಾಯಿತು.

ಅನಿಲ್ ಕುಂಬ್ಳೆ ಫೌಂಡೇಶನ್ ಹಾಗೂ ಬಯೋಟೆಕ್ ಸಂಸ್ಥೆಯ ಕಿರಣ್ ಮಜುಂದಾರ್ ಫೌಂಡೇಶನ್ ವತಿಯಿಂದ ನೀಡುವ ಈ ಪ್ರಶಸ್ತಿ ತಲಾ 1 ಲಕ್ಷ ರೂ. ಗಳನ್ನು ಒಳಗೊಂಡಿದೆ. ಕಳೆದ ಸಾಲಿನಲ್ಲಿ ಅರಣ್ಯ ಪ್ರದೇಶದಲ್ಲಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.