ADVERTISEMENT

ಗುಣಮಟ್ಟದ ಶಿಕ್ಷಣ: ಉದ್ಯೋಗಕ್ಕೆ ಸಹಕಾರಿ

ಉದ್ಯೋಗ ಮೇಳ: ವಿವಿಧ ಹುದ್ದೆಗೆ 175 ಅಭ್ಯರ್ಥಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 6:39 IST
Last Updated 22 ಜುಲೈ 2013, 6:39 IST

ಚಾಮರಾಜನಗರ: `ಔದ್ಯಮಿಕ ವಲಯದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಬೇಕು' ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಹಾಗೂ ಶಾಸಕರ ಸಹಯೋಗದೊಂದಿಗೆ ನಡೆದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.

ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದೆ. ಉದ್ಯೋಗ ಮೇಳದಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗಿ ನಿರುದ್ಯೋಗ ಸಮಸ್ಯೆ ನೀಗಲು ಸಹಕಾರಿಯಾಗಲಿದೆ. ಸರ್ಕಾರಿ  ಹಾಗೂ ಸರ್ಕಾರೇತರ ಸಂಸ್ಥೆಗಳು ಯುವಕರಿಗೆ ಉದ್ಯೋಗ ನೀಡಲು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಘೋಷಿಸಿರುವ 350 ಎಕರೆ ಗ್ರಾನೈಟ್ ಪಾರ್ಕ್ ನಿರ್ಮಾಣ ಯೋಜನೆಯು ಈ ಭಾಗದ ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶ ಒದಗಿಸಲಿದೆ ಎಂದರು.

ಜಾಗತೀಕರಣ ಸನ್ನಿವೇಶದಲ್ಲಿ ನಿರುದ್ಯೋಗಿಗಳು ಉದ್ಯೋಗ ಪಡೆಯಲು ಪೈಪೋಟಿ ಎದುರಿಸಬೇಕಾಗಿದೆ. ವಿಶೇಷ ಕೌಶಲ ಹಾಗೂ ತಾಂತ್ರಿಕ ನೈಪುಣ್ಯತೆ ಇರುವ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.

ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಿರುದ್ಯೋಗ ಪ್ರಮಾಣ ಕಡಿಮೆ ಮಾಡಲು ಉದ್ಯೋಗ ಮೇಳ ಆಯೋಜಿಸಲಾಗುತ್ತಿದೆ. ಈಗಾಗಲೇ ತಾಲ್ಲೂಕು ಕೇಂದ್ರಗಳಲ್ಲಿ ಯಶಸ್ವಿಯಾಗಿ ಇಂತಹ ಮೇಳ ಆಯೋಜಿಸಲಾಗಿದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ದೊರಕಿದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಸ್. ಲಿಂಗಣ್ಣ ಮಾತನಾಡಿ, ಮೇಳ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗ ನೀಡುವ ಕಂಪೆನಿಗಳ ಸಂಪರ್ಕ ಸೇತುವೆಯಾಗಿದೆ. ಹಿಂದೆ ಪುರುಷರಿಗೆ ಮಾತ್ರ ಉದ್ಯೋಗ ಲಭ್ಯವಾಗುತ್ತಿತ್ತು. ಈಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯಲು ಮುಂದೆ ಬರುತ್ತಿರುವುದು ಶ್ಲಾಘನೀಯ. ನಿರುದ್ಯೋಗಿಗಳು ಮಾನಸಿಕ ಖಿನ್ನತೆಯಿಂದ ಹೊರಬಂದು ಶ್ರಮವಹಿಸಿ ಕೌಶಲ ಹಾಗೂ ನೈಪುಣ್ಯತೆ ಮೈಗೂಡಿಸಿಕೊಳ್ಳಬೇಕು ಎಂದರು.

ಮೇಳದಲ್ಲಿ ವಿಮಾ ಕಂಪೆನಿಗಳು, ಮಾರ್ಕೆಟಿಂಗ್ ಸೆಕ್ಯೂರಿಟಿ ಸರ್ವೀಸಸ್, ಬಿಪಿಒ ವಾಯ್ಸ ಪ್ರೋಸೆಸ್, ಗಾರ್ಮೆಂಟ್ಸ್ ಸೇರಿದಂತೆ ವಿವಿಧ ಕಂಪೆನಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಉಪನ್ಯಾಸಕ ಡಾ.ದೇವರಾಜು, ಮಾನವ ಸಂಪನ್ಮೂಲ ಕೇಂದ್ರದ ಸಿಬ್ಬಂದಿ ಹಾಜರಿದ್ದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಡೆದ 642 ಅಭ್ಯರ್ಥಿಗಳು ಮೇಳಕ್ಕೆ ಆಗಮಿಸಿದ್ದರು. 8 ಕಂಪೆನಿಗಳಿಂದ 175 ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

24ರಂದು ಉದ್ಯೋಗ ಮೇಳ
ಚಾಮರಾಜನಗರ: ಕಾಲೇಜು ಶಿಕ್ಷಣ ಇಲಾಖೆಯಿಂದ ಜುಲೈ 24ರಂದು ಬೆಳಿಗ್ಗೆ 10ಗಂಟೆಗೆ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಯ ದಾಖಲಾತಿಗಳೊಂದಿಗೆ ಈ ಮೇಳದಲ್ಲಿ ಭಾಗವಹಿಸಬಹುದು. ಪದವಿ ಕಾಲೇಜುಗಳ ಹೊಸಹೆಜ್ಜೆ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.