ADVERTISEMENT

ಗುತ್ತಿಗೆ ಕಾರ್ಮಿಕರ ನೇಮಕಕ್ಕೆ ಅಸ್ತು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 10:50 IST
Last Updated 11 ಏಪ್ರಿಲ್ 2012, 10:50 IST

ಚಾಮರಾಜನಗರ: ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಣೆಗೆ ತಾತ್ಕಾಲಿಕವಾಗಿ ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮಂಗಳವಾರ ನಡೆದ ನಗರಸಭೆಯ ವಿಶೇಷ ಸಭೆ ಒಪ್ಪಿಗೆ ನೀಡಿದೆ.

ನಗರದ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪೌರಾಯುಕ್ತ ವಿ.ಎಚ್. ಕೃಷ್ಣಮೂರ್ತಿ ಮಾತನಾಡಿ, `23 ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸಲು 60 ಗುತ್ತಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು.

ಲೋಕೋಪಯೋಗಿ ಇಲಾಖೆಯ ದರಸೂಚಿಯಂತೆ ಅವರನ್ನು ಸೇವೆಗೆ ನಿಯೋಜಿಸಿಕೊಳ್ಳಲಾಗಿತ್ತು~ ಎಂದರು.
ಪ್ರಸ್ತುತ ಸರ್ಕಾರದ ಸುತ್ತೋಲೆ ಅನ್ವಯ ಭವಿಷ್ಯ ನಿಧಿ ಹಾಗೂ ಕಾರ್ಮಿಕರ ಕಲ್ಯಾಣ ನಿಧಿಯನ್ನು ಪರಿಷ್ಕರಿಸಲಾಗಿದೆ.

ಭವಿಷ್ಯ ನಿಧಿ ಹಾಗೂ ಕಾರ್ಮಿಕರ ಕಲ್ಯಾಣ ಭತ್ಯೆ ಪಾವತಿಸುವಂತೆ ಒತ್ತಾಯಿಸಿ ಗುತ್ತಿಗೆ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಈ ಬಗ್ಗೆ ಗುತ್ತಿಗೆದಾರರು ನಗರಸಭೆಗೆ ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ಸೂಚನೆ ಮೇರೆಗೆ 76 ಲಕ್ಷ ರೂ ಮೊತ್ತದಡಿ 23 ವಾರ್ಡ್‌ಗಳಲ್ಲಿ ಹೊರಗುತ್ತಿಗೆ ಮೂಲಕ ಸ್ವಚ್ಛತಾ ಕಾರ್ಯ ನಿರ್ವಹಿಸಲು ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಟೆಂಡರ್ ಕರೆಯಬೇಕಿದೆ. ಈಗ ಕಾರ್ಮಿಕರ ಮುಷ್ಕರದ ಹಿನ್ನೆಲೆಯಲ್ಲಿ ಸ್ವಚ್ಛತೆಗೆ ತೊಂದರೆಯಾಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.

`ಮೊದಲು ವಾರ್ಡ್‌ಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಒತ್ತು ನೀಡಬೇಕು. ಇಲ್ಲ ವಾದರೆ ಕಲ್ಮಷ ವಾತಾವರಣ ಸೃಷ್ಟಿ ಯಾಗಿ ಜನರು ತೊಂದರೆ ಅನುಭವಿ ಸಬೇಕಾಗುತ್ತದೆ. ಹಾಲಿ ಗುತ್ತಿಗೆ ದಾರರಿಗೆ ಮನ್ನಣೆ ನೀಡಬಾರದು. ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಮಿಕ ಕಾಯ್ದೆ ಅನ್ವಯ ಸಂಬಳ ನೀಡಬೇಕು~ ಎಂದು ಸದಸ್ಯರು ಒತ್ತಾಯಿಸಿದರು.

ಪೌರಾಯುಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, `ಗುತ್ತಿಗೆ ಕಾರ್ಮಿಕರನ್ನು ಹೊಸದಾಗಿ ನೇಮಿಸಿಕೊಳ್ಳಲು ಒಂದು ತಿಂಗಳ ಕಾಲಾವಕಾಶ ಬೇಕಿದೆ. ಹೀಗಾಗಿ, ತಾತ್ಕಾಲಿಕವಾಗಿ ಕಾರ್ಮಿಕರನ್ನು ನೇಮಿಸಿಕೊಂಡು ಬಾಕಿ ಉಳಿದಿರುವ ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಲಾಗುವುದು~ ಎಂದು ಸಭೆಗೆ ತಿಳಿಸಿದರು.

ತೆರವು ಕಾರ್ಯಾಚರಣೆ: ಸದಸ್ಯ ಸುರೇಶ್‌ನಾಯಕ ಮಾತನಾಡಿ, `ಉದ್ಯಾನಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ, ಎರಡು ತಿಂಗಳು ಮಾತ್ರ ಕೆಲಸ ನಿರ್ವಹಿಸಿ ಸುಮ್ಮನಿದ್ದಾರೆ.

ಗಿಡಗಳಿಗೆ ನೀರು ಸಿಂಪಡಿಸಲು ಸಮರ್ಪಕ ಪೈಪ್‌ಲೈನ್ ವ್ಯವಸ್ಥೆ ಇಲ್ಲ. ಗಿಡ ಕತ್ತರಿಸುವ ಸಲಕರಣೆಯೂ ಇಲ್ಲ. ಹೀಗಾದರೆ ಕಾರ್ಮಿಕರು ಕೆಲಸ ನಿರ್ವಹಿ ಸುವುದಾದರೂ ಹೇಗೆ? ಎಂದ ಅವರು, ನಗರದ ವ್ಯಾಪ್ತಿಯಲ್ಲಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮಕೈಗೊಳ್ಳಬೇಕು~ ಎಂದು ಒತ್ತಾಯಿಸಿದರು.

ಪೌರಾಯುಕ್ತ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, `ಪೊಲೀಸರ ರಕ್ಷಣೆಯೊಂದಿಗೆ ಶೀಘ್ರವೇ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.