ADVERTISEMENT

ಗೃಹ ಮಂಡಳಿ ನೋಟಿಸ್ ತಿರಸ್ಕರಿಸಿದ ರೈತರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 10:45 IST
Last Updated 18 ಮಾರ್ಚ್ 2011, 10:45 IST

ಸಂತೇಮರಹಳ್ಳಿ: ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ಉದ್ದೇಶಿತ ವಸತಿಗೃಹದ ಸಂಕೀರ್ಣ ನಿರ್ಮಾಣ ಸಂಬಂಧ ಕರ್ನಾಟಕ ಗೃಹ ಮಂಡಳಿ ನೀಡಿದ್ದ ನೋಟಿಸ್‌ಗೆ ರೈತರ ವಿರೋಧ ವ್ಯಕ್ತವಾಗಿದೆ. ಗ್ರಾಮದ ಸರ್ವೇ ನಂ. 6ರಿಂದ 13ರವರೆಗೆ ಸರ್ಕಾರಿ ಖರಾಬು ಜಮೀನು 2.03 ಎಕರೆ ಸೇರಿದಂತೆ ಒಟ್ಟು 28.11 ಎಕರೆ ಜಮೀನಿನಲ್ಲಿ ವಸತಿಗೃಹ ನಿರ್ಮಾಣಕ್ಕೆ ಮಂಡಳಿ ನಿರ್ಧರಿಸಿತ್ತು. ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನಿನ ಮುಕ್ಕಾಲು ಭಾಗ ಪರಿಶಿಷ್ಟರಿಗೆ ಸೇರಿದೆ.

ಭೂ ಸ್ವಾಧೀನಕ್ಕಾಗಿ ಮಂಡಳಿಯಿಂದ ಗುರುವಾರ ಸಂಬಂಧಪಟ್ಟ 16 ರೈತರಿಗೆ ತಿಳಿವಳಿಕೆ ಪತ್ರ ನೀಡಲು ಮುಂದಾಗಿದೆ. ನಾಡ ಕಚೇರಿಯ ಅಧಿಕಾರಿಗಳು ನೋಟಿಸ್ ನೀಡಲು ಹೋದ ವೇಳೆ ರೈತರು ಅದನ್ನು ಪಡೆಯದೇ ತಿರಸ್ಕರಿಸಿದ್ದಾರೆ. ಯಾವುದೇ, ಕಾರಣಕ್ಕೂ ಜಮೀನು ಬಿಟ್ಟುಕೊಡುವುದಿಲ್ಲ. ಎಲ್ಲಾ ಹಂತದ ಹೋರಾಟಕ್ಕೂ ಸಿದ್ಧವೆಂದು ಎಚ್ಚರಿಕೆ ರವಾನಿಸಿದ್ದಾರೆ.

ರೈತರು ಮಂಡಳಿಯಿಂದ ನೀಡಿದ ನೋಟಿಸ್ ಪಡೆಯಲಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ನಾಡ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.ವಸತಿಗೃಹ ನಿರ್ಮಾಣಕ್ಕೆ ಉದ್ದೇಶಿಸಿರುವ ಜಮೀನಿನಲ್ಲಿ ಬಹುತೇಕ ಬಡವರು ಹಾಗೂ ಅತಿಸಣ್ಣ ರೈತರು ಉಳುಮೆ ಮಾಡುತ್ತಿದ್ದಾರೆ. ಈ ಜಮೀನು ಕಳೆದುಕೊಂಡರೆ ಹೆಣ ಹೂಳಲು ಕೂಡ ಬೇರೆ ಜಮೀನು ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಭೂಸ್ವಾಧೀನಪಡಿಸಿಕೊಳ್ಳಬಾರದು ಎಂಬುದು ರೈತರ ಒತ್ತಾಯ.

‘ಸಂತೇಮರಹಳ್ಳಿಯ ಅಕ್ಕಪಕ್ಕದಲ್ಲಿ ನೂರಾರು ಎಕರೆ ಸರ್ಕಾರಿ ಜಮೀನಿದೆ. ಕೃಷಿಗೆ ಯೋಗ್ಯವಲ್ಲದ ಜಮೀನು ಸಹ ಇದೆ. ಅಲ್ಲಿ ವಸತಿಗೃಹ ನಿರ್ಮಾಣ ಮಾಡಲಿ. ನಮಗೆ ಅಲ್ಪಸ್ವಲ್ಪ ಜಮೀನಿದ್ದು, ಅದನ್ನು ಸ್ವಾಧೀನಪಡಿಸಿಕೊಂಡರೆ ನಾವು ಎಲ್ಲಿಗೆ ಹೋಗಬೇಕು? ಕೂಡಲೇ, ಸರ್ಕಾರ ನಿರ್ಧಾರ ಬದಲಾಯಿಸಬೇಕು. ಜಮೀನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಹೀಗಾಗಿ, ಮಂಡಳಿಯಿಂದ ನೀಡಿದ್ದ ನೋಟಿಸ್ ಸ್ವೀಕರಿಸಿಲ್ಲ’ ಎಂದು ಹೆಗ್ಗವಾಡಿಪುರದ ರೈತ ಮಲ್ಲಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.