ADVERTISEMENT

ಚಾಮರಾಜನಗರ: ಬಂದ್‌ಗೆ ನೀರಸ ಪ್ರತಿಕ್ರಿಯೆ

ಎಂದಿನಂತೆ ಸಂಚರಿಸಿದ ಬಸ್‌ಗಳು, ಮುಂಜಾಗ್ರತಾ ಕ್ರಮವಾಗಿ ಬಿಜೆಪಿ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 29 ಮೇ 2018, 11:24 IST
Last Updated 29 ಮೇ 2018, 11:24 IST

ಚಾಮರಾಜನಗರ: ಸಾಲಮನ್ನಾಕ್ಕೆ ಆಗ್ರಹಿಸಿ ಜಿಲ್ಲೆಯಲ್ಲಿ ಸೋಮವಾರ ಕರೆ ನೀಡಲಾಗಿದ್ದ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ‍ಪ್ರತಿಭಟನಾ ಮೆರವಣಿಗೆ ಮಾಡಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಬೆಳಿಗ್ಗೆಯಿಂದಲೇ ಜನಜೀವನ ಸಹಜವಾಗಿತ್ತು. ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿದ್ದವು. ಆಟೊ ಸಂಚಾರದಲ್ಲೂ ವ್ಯತ್ಯಯವಾಗಿರಲಿಲ್ಲ. ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದು ವಹಿವಾಟು ಆರಂಭಿಸಿದವು.

ಬಿಜೆಪಿ ಕರೆ ನೀಡಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಲಿಲ್ಲ. ಬೆಳಿಗ್ಗೆ 10.30ರ ನಂತರ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಗೆ ಇಳಿದರು.

ADVERTISEMENT

ಪೊಲೀಸರು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಬಾರದು ಎಂದು ಸೂಚನೆ ನೀಡಿ ಕೇವಲ ಮನವಿ ಮಾಡುವುದಕ್ಕಷ್ಟೇ ಅವಕಾಶ ನೀಡಿದರು. ಕೆಲ ಮುಖಂಡರು ಕೈಮುಗಿದು ಮನವಿ ಮಾಡುತ್ತಾ ದೊಡ್ಡ ಅಂಗಡಿ ಬೀದಿಯಲ್ಲಿ ಸಾಗಿದರು. ಕೆಲವು ಅಂಗಡಿ ಮಾಲೀಕರು ಕಾರ್ಯಕರ್ತರ ಮನವಿಗೆ ಓಗೊಟ್ಟು ಬಾಗಿಲು ಮುಚ್ಚಿದರು. ಮತ್ತೆ ಕೆಲವರು ಬಾಗಿಲು ಹಾಕಲು ಪ್ರತಿರೋಧ ವ್ಯಕ್ತಪಡಿಸಿದರು. ಕೆಲ ಕಾರ್ಯಕರ್ತರು ಅಂಗಡಿಗಳ ಮಾಲೀಕರೊಂದಿಗೆ ವಾಗ್ವಾದಕ್ಕೆ ಇಳಿದರು. ಇದರಿಂದ ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಇನ್‌ಸ್ಪೆಕ್ಟರ್ ಪೂವಯ್ಯ ಅವರು ಕಾರ್ಯಕರ್ತರನ್ನು ಮಾರುಕಟ್ಟೆ ಬಳಿ ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.

‌ಪೊಲೀಸರ ಕೃತ್ಯವನ್ನು ಖಂಡಿಸಿದ ಬಿಜೆಪಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ ಹಾಗೂ ಇತರರು ಘೋಷಣೆಗಳನ್ನು ಕೂಗಿದರು. ‘ಪ್ರಜಾಸತ್ತಾತ್ಮಕವಾದ ಪ್ರತಿಭಟನೆಯ ಹಕ್ಕನ್ನು ಪೊಲೀಸರು ಕಸಿಯುತ್ತಿದ್ದಾರೆ. ಸರ್ಕಾರದ ಕೈಬೊಂಬೆಯಂತೆ ಪೊಲೀಸರು ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಜಟಾಜಟಿ ನಡೆಯಿತು.‌

ನಗರದ ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ, ತರಕಾರಿ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಅಂಗಡಿಗಳು ಬಾಗಿಲು ತೆಗೆದಿದ್ದವು.

ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರೂ ಬಂದ್‌ ಮಾಡಲು ಮುಂದಾಗಲಿಲ್ಲ. ಬಸ್‌ ಹಾಗೂ ಆಟೊ ಸಂಚಾರ ಎಂದಿನಂತೆ ಇದ್ದುದ್ದರಿಂದ ಜನಜೀವನ ಅಸ್ತವ್ಯಸ್ತಗೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.