ADVERTISEMENT

ಜಿಲ್ಲಾಧಿಕಾರಿಯಾಗಿ ಕಾವೇರಿ ಅಧಿಕಾರ ಸ್ವೀಕಾರ

ವರ್ಗಾವಣೆಗೊಂಡ ರಾಮು ಅವರಿಗೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯಿಂದ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 10:56 IST
Last Updated 13 ಮಾರ್ಚ್ 2018, 10:56 IST
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನೂತನ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರನ್ನು ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಸ್ವಾಗತಿಸಿದರು
ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನೂತನ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರನ್ನು ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಸ್ವಾಗತಿಸಿದರು   

ಚಾಮರಾಜನಗರ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬಿ.ಬಿ. ಕಾವೇರಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾವೇರಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಬಳಿಕ ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಅವರು ಅಧಿಕಾರ ಹಸ್ತಾಂತರಿಸಿದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕಾವೇರಿ, ‘ಕೋಲಾರದಿಂದ ಇಲ್ಲಿಗೆ ವರ್ಗಾವಣೆಯಾಗಿ ಬಂದಿದ್ದೇನೆ. ಮುಂದೆ ಬರಲಿರುವ ಚುನಾವಣಾ ಕಾರ್ಯಗಳಿಗೆ ಸಿದ್ಧತೆ ನಡೆಸಬೇಕಿದೆ. ಜತೆಗೆ ಅಭಿವೃದ್ಧಿ ಕೆಲಸಗಳಿಗೂ ಗಮನ ನೀಡಬೇಕಿದೆ. ಒಳ್ಳೆಯ ಕೆಲಸಗಳಿಗೆ ಎಲ್ಲರ ನೆರವು ಬೇಕು’ ಎಂದರು.

ADVERTISEMENT

ಚಾಮರಾಜನಗರ ಜಿಲ್ಲೆಯು ಅರಣ್ಯ ಪ್ರದೇಶದಿಂದ ಹೆಚ್ಚು ಕೂಡಿದೆ. ಬುಡಕಟ್ಟು ವರ್ಗಗಳ ಜನರ ಸಂಖ್ಯೆಯೂ ಸಾಕಷ್ಟಿದೆ. ಅಭಿವೃದ್ಧಿ ಎಂದರೆ ಕೇವಲ ಪಟ್ಟಣದ ಪ್ರಗತಿ ಅಲ್ಲ. ಹಳ್ಳಿಗಳು ಸೇರಿದಂತೆ ಎಲ್ಲ ಭಾಗಗಳೂ ಅಭಿವೃದ್ಧಿಯಾದರೆ ಸಮಗ್ರ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ರಾಮು ಅವರಿಗೆ ಬೀಳ್ಕೊಡುಗೆ: ಸುಮಾರು ಎರಡು ವರ್ಷಗಳಿಂದ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಬೆಂಗಳೂರಿನ ಪಶುಸಂಗೋಪನೆ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಬಿ. ರಾಮು ಅವರಿಗೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಮುಖಂಡರು ಬೀಳ್ಕೊಡುಗೆ ನೀಡಿದರು.

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ರಾಮು ಮತ್ತು ಅವರ ಪತ್ನಿ ಸುಮಾ ಅವರಿಗೆ ಹೂಗುಚ್ಛ ನೀಡಿ, ಶಾಲು ಹೊದೆಸಿ ಅಭಿನಂದಿಸಿದರು. ಕೆಲವರು ನೆನಪಿನ ಕಾಣಿಕೆಯನ್ನು ನೀಡಿದರು.

ರೈತ ಮುಖಂಡ ಹೊಂಗನೂರು ಪ್ರಕಾಶ್‌, ರತ್ನಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಉಪ ವಿಭಾಗಾಧಿಕಾರಿ ಬಿ. ಫೌಜಿಯಾ ತರನ್ನುಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್. ಪ್ರಸಾದ್‌, ತಹಶೀಲ್ದಾರ್‌ ಕೆ. ಪುರಂದರ, ಕನ್ನಡ ಸಂಘಟನೆ ಮುಖಂಡರಾದ ಶಾ. ಮುರಳಿ, ಚಾ.ರಂ. ಶ್ರೀನಿವಾಸಗೌಡ ಮುಂತಾದವರು ರಾಮು ಅವರೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.